ಕಲಬುರಗಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಅವರ ಬೆಂಬಲಿಗರು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಅಥವಾ ಪುಣೆಗೆ ಕಾರ್‌ನಲ್ಲಿ ಬಿಟ್ಟು ಬಂದಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಈ ಬಗ್ಗೆ ಕಲಬುರಗಿ ಪೊಲೀಸರು ಎಲ್ಲ ಆಯಮಾದಿಂದಲೂ ಮಾಹಿತಿ ಸಂಗ್ರಹಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಅಕ್ರಮ ಪರೀಕ್ಷೆ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಅವರನ್ನು ಕಾರ್‌ನಲ್ಲಿ ಡ್ರಾಪ್ ನೀಡಿದ ಮಾಹಿತಿ ಮೇರೆಗೆ ಆತನ ಕೆಲ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ೫೪೫ ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಪುಣೆ, ಸೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದ. ಸೊಲ್ಲಾಪುರ, ಪುಣೆ ತನ್ನ ಅಡಗು ತಾಣ ಮಾಡಿಕೊಂಡಿದ್ದು, ಇಲ್ಲಿ ಈತನಿಗೆ ಅನೇಕ ಜನ ಪರಿಚಯಸ್ಥರಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಪಿಎಸ್‌ಐ ಪರೀಕ್ಷೆ ಅಕ್ರಮ ನಡೆದಾಗ ಸಹಿತ ಇಲ್ಲಿ ಅಡಗಿಕೊಂಡಿದ್ದ ಮಾಹಿತಿ ಮೇರೆಗೆ ಆತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬುಧವಾರ ಅಥವಾ ಗುರುವಾರದೊಳಗೆ ಬಂಧಿಸುವ ಸಾಧ್ಯತೆಗಳು ದಟ್ಟವಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪೊಲೀಸರಿಗೆ ಶರಣಾಗಲೇಬೇಕು.