ಸಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರತಿಪಕ್ಷದ ನಾಯಕ ಯಾರು?

0
12

ವಿಲಾಸ ಜೋಶಿ
ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಡಿಸೆಂಬರ ೪ ರಿಂದ ಪ್ರಾರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಯಾರು ಆಗಬಹುದು ಎನ್ನುವ ಕುತೂಹಲ ಎಲ್ಲರನ್ನು ಕಾಡತೊಡಗಿದೆ.
ಬೆಂಗಳೂರಿನಲ್ಲಿ ನಡೆದ ಅಧಿವೇಶನವು ವಿರೋಧ ಪಕ್ಷದ ನಾಯಕನಿಲ್ಲದೇ ಮುಗಿದು ಹೋಯಿತು, ಈಗ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಿಸಿಕೊಳ್ಳುವ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ನಾಯಕನ ಆಯ್ಕೆ ಅಷ್ಟರೊಳಗೆ ಆಗಬಹುದು ಎನ್ನುವ ಮಾತಿದೆ.
ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದ ಬಿಜೆಪಿ ವಿರುದ್ಧ ಆಡಳಿತ ಪಕ್ಷದವರು ವ್ಯಂಗ್ಯ ಮಾಡುವಂತಾಗಿದೆ. ಒಂದು ರೀತಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೀಗಾಗಿ ಆ ಮಾತುಗಳನ್ನು ತಪ್ಪಿಸಿಕೊಳ್ಳುವ ಉದ್ದೇಶಕ್ಕಾದರೂ ಬಿಜೆಪಿಯು ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಲಿಂಗಾಯತರನ್ನು ಸೆಳೆಯುವ ದೃಷ್ಟಿಯಿಂದ ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇನ್ನು ಒಕ್ಕಲಿಗರ ಲೆಕ್ಕದಲ್ಲಿ ಆರ್. ಅಶೋಕ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಬಹುತೇಕರ ಒಲವು ಯತ್ನಾಳ ಅವರನ್ನು ಮಾಡಿದರೆ ಸೂಕ್ತ ಎನ್ನುವ ಮಾತು ಕೇಳಿಬರುತ್ತಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದವರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಮಾಡಬೇಕು ಎನ್ನುವ ಕೂಗೂ ಸಹ ಹೆಚ್ಚಾಗುತ್ತಿದೆ. ಯತ್ನಾಳರು ಪ್ರಖರ ಹಿಂದುತ್ವವಾದಿ ಎನ್ನುವ ಹೆಣೆಪಟ್ಟಿ ಕಟ್ಟಿಕೊಂಡಿದ್ದಾರೆ, ಅಷ್ಟೇ ಅಲ್ಲ ಈ ಹಿಂದೆ ಪಂಚಮಸಾಲಿ ೨ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದವರು. ಅದೇ ಕಾರಣದಿಂದ ಈಗ ಯತ್ನಾಳರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.
ಸಮರಕ್ಕೆ ಸಿದ್ಧವಾದ ಬಿಜೆಪಿ:
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಬಿಜೆಪಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಳೆದ ದಿನವಷ್ಟೇ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ವಿದ್ಯುತ್ ದರ ಹೆಚ್ಚಳ ಸೇರಿದಂತೆ ಇನ್ನಿತರ ಸಮಸ್ಯೆ ಮುಂದಿಟ್ಟುಕೊಂಡು ಸೌಧದ ಮುತ್ತಿಗೆ ಎಚ್ಚರಿಕೆ ನೀಡಿದ್ದರು.
ಹೀಗಾಗಿ, ಸೌಧದ ಹೊರಗೆ ಒಂದು ರೀತಿಯ ಹೋರಾಟ ನಡೆದರೆ ಸೌಧದೊಳಗೆ ಸರ್ಕಾರಕ್ಕೆ ಬಾರಕೋಲು ಏಟು ನೀಡುವ ಕೆಲಸ ಮಾಡುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಯತ್ನಾಳ ಸಮರ್ಥರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Previous articleಮ್ಯಾಕ್ಸ್‌”ವೆಲ್” ಆಟ: ಆಸ್ಟ್ರೇಲಿಯಾಕ್ಕೆ ಗೆಲುವು
Next articleತೇಗ ಕೊಂಡು ಹಣ ನೀಡದ ಆರೋಪಿಗೆ 75 ಸಾವಿರ ದಂಡ