ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

0
24

ಚಿಕ್ಕಮಗಳೂರು: ಶೌಚಾಲಯ ನಿರ್ಮಾಣ ಕಾಮಗಾರಿಯ ಆಡಳಿತಾತ್ಮಕ ಮಂಜೂರಾತಿ ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೂಡಿಗೆರೆ ತಾಲೂಕಿನ ಹೆಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪು ನಗರ ವಾಸಿ ಅಬುಬೇಕರ್‌ರವರ ಪುತ್ರ ನೀಡಿದ ದೂರನ್ನು ಆಧರಿಸಿ, ದಾಳಿ ನಡೆಸಿದ ಪೊಲೀಸರು ಉಪನಿರ್ದೇಶಕ ರಂಗನಾಥ ಸ್ವಾಮಿ ಮತ್ತು ದ್ವಿತೀಯ ದರ್ಜೆ ಸಹಾಯಕ ಅಸ್ರಾರ್ ಅಹಮದ್ ರನ್ನು ಬಂಧಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಲ್ಲಿಬೈಲು ಮತ್ತು ಕಡೆಮಡಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4.80 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದು ಅದಕ್ಕೆ ಆಡಳಿತಾತ್ಮಕ ಅನುಮೋದನೆ ಅಗತ್ಯವಿತ್ತು.
ಅನುಮೋದನೆ ನೀಡುವಂತೆ ಡಿಡಿಪಿಐ ರವರನ್ನು ಗುತ್ತಿಗೆದಾರರ ಮಗ ಭೇಟಿಯಾದಾಗ ಅವರು ದ್ವಿತೀಯ ಸಹಾಯಕ ಅಸ್ರಾರ್ ಅಹಮದ್ ಭೇಟಿಯಾಗಲು ತಿಳಿಸಿದ್ದರು ಎನ್ನಲಾಗಿದೆ.
2% ರಂತೆ 10000 ರೂ ಗಳಿಗೆ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ 4000ಗಳಿಗೆ ಒಪ್ಪಿಗೆಯಾಗಿ 1000 ಮುಂಗಡ ನೀಡಿ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು.
ಉಳಿಕೆ 3000 ರೂ ನೀಡುವ ಕುರಿತು ಡಿಡಿಪಿಐ ರವರೊಂದಿಗೆ ನಡೆಸಿದ ಸಂಭಾಷಣೆಯನ್ನು ಮುದ್ರಿಸಿಕೊಂಡು ಲೋಕಾಯುಕ್ತಕ್ಕೆ ನೀಡಲಾಗಿತ್ತು.
ಇಂದು ಉಳಿಕೆ ಹಣ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ರಂಗನಾಥ ಸ್ವಾಮಿ ಮತ್ತು ಅಸ್ರಾರ್ ಅಹಮದ್ ರವರನ್ನು ವಶಕ್ಕೆ ಪಡೆಯಲಾಗಿದೆ.
ಈ ದಾಳಿಯಲ್ಲಿ ಇನ್ಸ್ಪೆಕ್ಟರ್ಗಳಾದ ಮಲ್ಲಿಕಾರ್ಜುನ್, ಅನಿಲ್ ರಾಥೋಡ್, ಸಿಬ್ಬಂದಿ ವೇದಾವತಿ, ವಿಜಯ ಭಾಸ್ಕರ್, ಸಲ್ಮಾ ಬೇಗಮ್, ಅನಿಲ್ ನಾಯಕ್, ಪ್ರಸಾದ್ ,ರವಿ, ಮುಜಬ್ ಪಾಲ್ಗೊಂಡಿದ್ದರು

Previous articleಮೈಮೇಲೆ ಬಿಸಿ ಸಾಂಬಾರ್ ಬಿದ್ದು ಗಾಯಗೊಂಡಿದ್ದ ಬಾಲಕ ಸಾವು
Next articleನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು