ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಡಿಡಿಪಿಐ ಬಸವರಾಜ ನಾಲತವಾಡ ಅವರನ್ನು ಬಂಧಿಸಿದ್ದಾರೆ.
ಇವರ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಯ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದ ತಂಡ ದಾಳಿ ಮಾಡಿದೆ. ಈ ವೇಳೆ ಡಿಡಿಪಿಐ ಬಸವರಾಜ ನಾಲತವಾಡ ೪೦ ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪರವಾನಗಿ ನವೀಕರಣ ಮಾಡಿಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಡಿಡಿಪಿಐ ವಿರುದ್ಧ ಶಾಲೆಯ ಮುಖ್ಯಸ್ಥ ಅರ್ಜುನ ಕುರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶುಕ್ರವಾರ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಕಾಲ ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆಸಿದ್ದಾರೆ.