ಸುಳ್ಳು ಜಾತಿ ಪ್ರಮಾಣಪತ್ರದಿಂದ ಗ್ರಾಪಂಗೆ ಆಯ್ಕೆ: ಮಹಿಳೆಗೆ ಏಳು ವರ್ಷ ಜೈಲು

0
14
ಜೈಲು

ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ.ಗೆ ಆಯ್ಕೆಯಾಗಿದ್ದ ಗುತ್ತಲ ಗ್ರಾಮದ ಮುಕ್ತಾಬಾಯಿ ರಂಗಪ್ಪ ಬೀಸೆ ಹಾಗೂ ಸಹಾಯ ಮಾಡಿದ ಭರಡಿ ಗ್ರಾಮದ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಅವರಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ೩೭ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರಕರಣದ ವಾದ ವಿವಾದ ಆಲಿಸಿದ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಈ ತೀರ್ಪು ನೀಡಿದ್ದಾರೆ.
ಗುತ್ತಲ ಗ್ರಾಮದ ಆರೋಪಿ ಮುಕ್ತಾಬಾಯಿಯು ಹಿಂದೂ ಗೊಂದಳಿ (ಪ್ರವರ್ಗ-೦೧)ಕ್ಕೆ ಸೇರಿದ್ದರೂ ಕಳ್ಳಪ್ಪ ದೊಡ್ಡರಾಮಪ್ಪ ತಳವಾರ ಹಾಗೂ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಅವರ ಸಹಕಾರ ಪಡೆದು ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ ಪಜಾ ಪ್ರಮಾಣಪತ್ರ ಪಡೆದಿದ್ದಳು. ೨೦೧೦ರಲ್ಲಿ ಗುತ್ತಲ ಪಂಚಾಯಿತಿ ವಾರ್ಡ್ ನಂ.೧೦ರ ಪಜಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಳು.
ಈ ಕುರಿತಂತೆ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿ.ಐ. ಎ.ಬಿ. ಹಪ್ಪಳಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆಪಾದನೆಗಳು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleದೂಧಸಾಗರ ಜಲಪಾತ ವೀಕ್ಷಣೆಗೆ ಅವಕಾಶ
Next articleಸತ್ಸಂಗದಲ್ಲಿ ದೈವ ಸಂಕಲ್ಪ ಮೀರುವ ಶಕ್ತಿ ಇದೆ