ಮಂಡ್ಯ ಬಂದ್ ಸಂಪೂರ್ಣ ಯಶಸ್ವಿ

0
30

ಮಂಡ್ಯ :- ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಂಡ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ ಬೆಂಬಲಿಸಿದ್ದು ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಬಂದ್ ಸಂಪೂರ್ಣ ಯಶಸ್ವಿಯಾಯಿತು. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟು ಬಾಗಿಲು ಮುಚ್ಚಿದ್ದು, ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು, ಮಾಲ್, ಹೋಟೆಲ್,ಸಣ್ಣಪುಟ್ಟ ಅಂಗಡಿಗಳು ಸಹ ಬಾಗಿಲು ಮುಚ್ಚಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು, ಬಹುತೇಕ ಕಡೆ ಬೀದಿಬದಿ ವ್ಯಾಪಾರ ಕಂಡುಬರಲಿಲ್ಲ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿತ್ತು, ಸರ್ಕಾರಿ,ಖಾಸಗಿ ಬಸ್, ಟೆಂಫೋ ಸಂಚಾರ ಇಲ್ಲದ ಪರಿಣಾಮ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿತ್ತು,ಸರಕು ಸಾಗಾಣಿಕೆ ವಾಹನಗಳು ಸಹ ಸಂಚಾರ ಸ್ಥಗಿತ ಮಾಡಿದ್ದವು,ಆಟೋ ಸಂಚಾರ ವಿರಳವಾಗಿತ್ತು,ಸಾರ್ವಜನಿಕರು ಪ್ರಯಾಣಕ್ಕೆ ಬೈಕ್ ಸ್ಕೂಟರ್ ಗಳನ್ನು ಅವಲಂಬಿಸಿದ್ದು ಕಂಡುಬಂದಿತ್ತು.
ಬೆಂಗಳೂರು – ಮೈಸೂರಿನ ಪ್ರಯಾಣ ಮಾಡುವವರು ರೈಲಿನಲ್ಲಿ ಪ್ರಯಾಣಿಸಿದರು, ರೈಲು ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗದ ಹಿನ್ನಲೆಯಲ್ಲಿ ಎಂದಿನಂತೆ ರೈಲುಗಳು ಸಂಚಾರ ಮಾಡಿದವು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಕಾರಿ ಕಚೇರಿ, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದವು ಆದರೆ ಕಚೇರಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು, ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಚಲನಚಿತ್ರ ಮಂದಿರಗಳಲ್ಲಿ ದಿನದ ನಾಲ್ಕು ಚಿತ್ರ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು, ಕೆಲವೆಡೆ ಪೆಟ್ರೋಲ್ ಬಂಕ್ ಗಳು ಗ್ರಾಹಕರಿಗೆ ಪೆಟ್ರೋಲ್ ಒದಗಿಸಿದವು.
ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣ ಸಂಪೂರ್ಣ ಬಿಕೋ ಎನ್ನುತ್ತಿದ್ದರೆ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಕೆಂಪು ಬಸ್ಸಿನ ಸೌಂದರ್ಯ ಇಲ್ಲದೆ ಕಳೆ ಗುಂದಿತ್ತು.ಜನ ಜೀವನ ಸಹಜ ಸ್ಥಿತಿಯಲ್ಲಿತ್ತು, ಯಾವುದೇ ಆಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ,ಬಂದ್ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.

Previous articleಕಾವೇರಿ ಹೋರಾಟಕ್ಕಿಳಿದ ಮಂಗಳಮುಖಿಯರು
Next articleಕರ್ನಾಟಕ ಬಂದ್‌ಗೆ ಕಾಫಿ ನಾಡಲ್ಲಿ ಉತ್ತಮ ಪ್ರತಿಕ್ರಿಯೆ