ರಾಜ್ಯದ ಸಂಸದರು,ತ.ನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಆಕ್ರೋಶ

0
18

ಮಂಡ್ಯ :- ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಮಂಡ್ಯದಲ್ಲಿ ವಿವಿಧ ಸಂಘಟನೆಗಳು ಹೋರಾಟ ನಡೆಸಿ ಆಕ್ರೋಶಿಸಿದರು.
ಬೆಳ್ಳಂ ಬೆಳಿಗ್ಗೆ ಬೀದಿಗಿಳಿದ ಜಿಲ್ಲಾ ರೈತ ಹಿತರಕ್ಷಣ ಸಮಿತಿ, ರೈತ ಸಂಘ, ಪ್ರಗತಿಪರ, ದಲಿತ, ಮುಸ್ಲಿಂ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ವಿಭಿನ್ನ ಪ್ರತಿಭಟನೆ ನಡೆಸಿ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಜೊತೆಗೂಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ,ಕನ್ನಡ ಸೇನೆ ಕಾರ್ಯಕರ್ತರು
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರ ಹಿಡಿದು ಧಿಕ್ಕಾರದ ಘೋಷಣೆ ಕೂಗುತ್ತಾ ಕರ್ನಾಟಕದ ರೈತರ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಲು ಮುಂದಾದಾಗ,ತಕ್ಷಣ ಎಚ್ಚೆತ್ತ ಪೊಲೀಸರು ತಮಿಳುನಾಡು ಮುಖ್ಯಮಂತ್ರಿ ಭಾವಚಿತ್ರವನ್ನು ಪ್ರತಿಭಟನಾಕಾರರಿಂದ ಕಿತ್ತು ತೆಗೆದುಕೊಂಡು ಹೋದರು,
ರಾಜ್ಯದ ಸಂಸದರ ಭಾವಚಿತ್ರ ಹಿಡಿದು ಪ್ರತಿಭಟಿಸಿ ಕಾವೇರಿ ಹೋರಾಟಕ್ಕೆ ಬಾರದ ಬೇಜವಾಬ್ದಾರಿ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಂಸದರಿಗೆ ಹಿಡಿ ಶಾಪ ಹಾಕಿದರು
ಉರುಳು ಸೇವೆ ಮಾಡಿ ಆಳುವ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಿ ಎಂದು ಒತ್ತಡ ಹಾಕಿದರು
ವಿವಿಧ ಸಂಘಟನೆಗಳ ಕಾರ್ಯಕರ್ತರು ಜೊತೆಗೂಡಿ ಮಾನವ ಸರಪಳಿ ರಚಿಸಿ ಕಾವೇರಿ ವಿಚಾರವಾಗಿ ನಿರ್ಲಕ್ಷ ತೋರಿರುವ ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮುಖಂಡನೊಬ್ಬ ಅಂಗೈ ಕೊಯ್ದು ಕೊಂಡು ರಕ್ತ ಚಿಮ್ಮಿಸಿ ಕಾವೇರಿ ನಮ್ಮದು ರಕ್ತ ಕೊಟ್ಟರೂ ನೀರು ಬಿಡೆವು ಎಂದರು
ಕನ್ನಡ ಸೇನೆ ಕಾರ್ಯಕರ್ತರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿ ಕಾವೇರಿ ವಿಚಾರದಲ್ಲಿ ಕನ್ನಡಿಗರು ಮತ್ತು ರೈತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.
ಎಸ್ ಡಿ ಪಿ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಕನ್ನಡಪರ ಸಂಘಟನೆಗಳು, ಎಸ್ ಡಿಪಿಐ,ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಪ್ರಮುಖ ರಸ್ತೆಗಳಲ್ಲಿ ತೆರಳಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.

Previous articleಸಬ್ ಜೂನಿಯರ್ ಖೋಖೋ : ರಾಜ್ಯ ತಂಡಕ್ಕೆ ಲೇಖನ‌ ಆಯ್ಕೆ
Next articleಕಾವೇರಿ ಹೋರಾಟ : ಕರವೇಯಿಂದ ಪ್ರತಿಭಟನೆ