ಸಂಕಷ್ಟ ಸೂತ್ರ ಅಗತ್ಯ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹ

0
27

ಮಂಡ್ಯ: ಹಲವಾರು ದಶಕಗಳಿಂದ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಕುಡಿಯುವ ನೀರು ಕೊಡಬೇಕು. ಅನಂತರ ವ್ಯವಸಾಯಕ್ಕೆ ಕೊಡಬೇಕು, ಪ್ರತಿ ವರ್ಷ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರು ನಿಗದಿ ಮಾಡಲಾಗಿದೆ. ಆದರೆ ಮಳೆ ಕಡಿಮೆ ಆಗದ ಸಂದರ್ಭದಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದು ಈಗಿನ ಸಮಸ್ಯೆಗೆ ಕಾರಣವಾಗಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮಂಡ್ಯದಲ್ಲಿ ಹಲವಾರು ದಿನಗಳಿಂದ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಬೆಳೆ ಒಣಗುವುದು ಒಂದೆಡೆ ಆದರೆ ಮನುಷ್ಯನೇ ಒಣಗಿ ಹೋಗ್ತಾನೆ. ಮನುಷ್ಯನ ಅಸ್ತಿತ್ವವೇ ಈಗ ಪ್ರಶ್ನೆ ಆಗಿದೆ.
ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು. ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲಾಗಿದೆ. ಈಗ ಮತ್ತೆ 5 ಸಾವಿರ ಕ್ಯೂಸೆಕ್ 15 ದಿನ ಹರಿಸಲು ಸೂಚನೆ ನೀಡಿದ್ದಾರೆ.
ನಮ್ಮ ರೈತರ ಹಿತ ಕಾಯಬೇಕು. ಈಗಿನ ಆದೇಶ ಪಾಲನೆ ಮಾಡಬೇಕು, ಪಾಲನೆ ಮಾಡಿದ್ರೆ ರೈತರ ಬದುಕು ಬೀದಿಗೆ ಬರಲಿದೆ. ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳ ಜೊತೆ ನಾನು ಮಾತನಾಡ್ತೀನಿ.ಸಂಕಷ್ಟ ಸೂತ್ರಕ್ಕಾಗಿ ಒತ್ತಾಯಿಸುತ್ತೇನೆ ಎಂದರು.
ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಮಳೆ ಬಿದ್ದಾಗ ಹೆಚ್ಚುವರಿ ಸಂಗ್ರಹಿಸಿದ್ರೆ, ಇಂತಹ ಕಷ್ಟ ಕಾಲದಲ್ಲಿ ಹರಿಸಬಹುದು. ಎರಡು ರಾಜ್ಯಗಳಿಗೂ ಮೇಕೆದಾಟು ಯೋಜನೆ ಸಹಕಾರಿ. ನಮ್ಮ ರೈತರು ಸುಖಾಸಮ್ಮನೆ ರಸ್ತೆಗೆ ಬರಲ್ಲ. ಬೀದಿಗೆ ಇಳಿದಿದ್ದಾನೆ ಎಂದರೆ ಆತನಿಗೆ ಕಷ್ಟ ಇದೆ ಎಂದರ್ಥ. ಈಗಿನ ಕ್ಯಾಬಿನೆಟ್ ನಲ್ಲಿ ರೈತರ ಪರ ನಿರ್ಧಾರವಾಗಲಿ, ರೈತರ ಪರವಾಗಿ ಶ್ರೀ ಮಠ ಯಾವಾಗಲೂ ಇರುತ್ತದೆ. ನಮ್ಮನ್ನ ಯಾರು ಕರೆಯದೆ ಇದ್ರು ಬಂದಿದ್ದೇವೆ, ಇದು ನಮ್ಮ ಕರ್ತವ್ಯ ಎಂದು ನುಡಿದರು.

Previous articleಕಾವೇರಿ ವಿಚಾರದಲ್ಲಿ ಉಡಾಫೆ ಮುಂದುವರಿದರೆ ಜನ ದಂಗೆ ಏಳುತ್ತಾರೆ
Next article28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಗೆಲ್ಲುವುದೇ ಗುರಿ