ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ೧೦ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯ ಪರಿಷ್ಕೃತ ದಿನಾಂಕ ಪ್ರಕಟಗೊಂಡಿದೆ. ಪ್ರೊ ಕಬಡ್ಡಿ ಲೀಗ್‌ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ಹರಾಜು ಪ್ರಕ್ರಿಯೆ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ. ಹರಾಜು ಪ್ರಕ್ರಿಯೆ ಅಕ್ಟೋಬರ್ ೯ ಮತ್ತು ೧೦ರಂದು ಮುಂಬಯಿಯಲ್ಲಿ ನಡೆಯಲಿದೆ.
ಈ ಬಾರಿ ಕೆಲ ಬದಲಾವಣೆ ಮಾಡಲಾಗಿದ್ದು, ಮೂರು ಆವೃತ್ತಿಗಳ ಬಳಿಕ ಪ್ರತಿ ಫ್ರಾಂಚೈಸಿಗೆ ಲಭ್ಯವಿರುವ ಒಟ್ಟು ವೇತನ ೪.೪ ಕೋಟಿ ರೂ.ಗಳನ್ನು ೫ ಕೋಟಿ ರೂ.ಗೆ ಏರಿಸಲಾಗಿದೆ. ಈ ಮಹತ್ವದ ಟೂರ್ನಿ ಡಿಸೆಂಬರ್ ೨ರಂದು ಆರಂಭವಾಗಲಿದೆ.
ಹರಾಜು ಪ್ರಕ್ರಿಯೆಯಲ್ಲಿ ದೇಶೀಯ ಮತ್ತು ವಿದೇಶಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ. ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲಿ ಆಟಗಾರರನ್ನು ಆಲ್ ರೌಂರ‍್ಸ್, ಡಿಫೆಂಡರ್ಸ್ ಮತ್ತು ರೈಡರ್ಸ್ ಎಂದು ಪ್ರತ್ಯೇಕಿಸಲಾಗಿದೆ.
ಪೂರ್ವ ನಿಗದಿಯಂತೆ ಆಟಗಾರರ ಹರಾಜು ಸೆಪ್ಟೆಂಬರ್ ೮ ರಿಂದ ೯ ರವರೆಗೆ ಮುಂಬೈಯಲ್ಲಿ ನಡೆಯಬೇಕಿತ್ತು. ಆದರೆ ಏಷ್ಯನ್ ಗೇಮ್ಸ್ಗೆ ರಾಷ್ಟ್ರೀಯ ತಂಡದ ಆಟಗಾರರ ತರಬೇತಿ ಶಿಬಿರದ ಸಿದ್ಧತೆಗಳಿಗೆ ನೆರವಾಗುವಂತೆ ಕೋರಿ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್ ಸಲ್ಲಿಸಿದ ಮನವಿಯ ಮೇರೆಗೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.