ಧಾರಾಕಾರ ಮಳೆ: ದವಸ-ಧಾನ್ಯ ಹಾನಿ

0
8

ಕುಷ್ಟಗಿ: ಹನುಮಸಾಗರ, ಹನುಮನಾಳ ಹೋಬಳಿಯ ವ್ಯಾಪ್ತಿಯಲ್ಲಿ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿ ರೈತರು ಬೆಳೆದ ಹತ್ತಿ, ಜೋಳ ಸೇರಿದಂತೆ ದವಸ-ಧಾನ್ಯಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ತಡರಾತ್ರಿ ಹನುಮನಾಳ ವ್ಯಾಪ್ತಿಯಲ್ಲಿ ೧೫೪ಮಿ.ಮೀ ಮಳೆ ಸುರಿದಿದ್ದರಿಂದ ಸಮೀಪದ ತುಗ್ಗಲದೋಣಿ ಗ್ರಾಮದಲ್ಲಿ ಹಳೆಕೆರೆ ಒಡೆದು ೩೦-೪೦ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.
ತುಗ್ಗಲದೋಣಿ ಗ್ರಾಮದ ಹಳೆ ಕೆರೆ ಒಡೆದ ಪರಿಣಾಮವಾಗಿ ಗ್ರಾಮದ ಹೊಳೆಯಪ್ಪ ಕುರುಬರ, ಗಂಗಾಧರ ಗದ್ದಿ, ಶೇಖಪ್ಪ ಬೆಣ್ಣಿ, ಹುಸೇನಸಾಬ್ ರಾಂಪೂರ, ಬಾಬುಸಾಬ್ ಬಾರಿಗಿಡದ, ಬಸಪ್ಪ ಭಜಂತ್ರಿ, ಹನುಮಂತಗೌಡ ಸಿಪಾಯಿ, ಮಲ್ಲಪ್ಪ ಕಳ್ಳಿ, ಅನುಸೂಯವ್ವ, ಶರಣಪ್ಪ ಸೇರಿದಂತೆ ೪೦ಕ್ಕೂ ಹೆಚ್ಚು ಜನರ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ರೈತರ 2-3 ಕ್ವಿಂಟಲ್ ಹತ್ತಿ, ಕಿರಾಣಿ ಅಂಗಡಿಯಲ್ಲಿದ್ದು ಸಾಮಗ್ರಿಗಳು, ದವಸ-ಧಾನ್ಯಗಳು ನೀರಲ್ಲಿ ಮುಳಗಿ ನಷ್ಟವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಕೆರೆ ಒಡೆಯುವುದಕ್ಕೆ ಪ್ರಮುಖವಾಗಿ ಗ್ರಾಪಂ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣ. ಕೆರೆ ಕೋಡಿಯಲ್ಲಿ ನೀರು ಸಮರ್ಪಕವಾಗಿ ಹೋಗದಿರುವುದು ಮತ್ತು ಹೊಸಕೆರೆಗೆ ಹೊಂದಿಕೊಂಡಿರುವ ಹಳೆಕೆರೆಯಲ್ಲಿ ಹೂಳು ಎತ್ತದಿರುವುದು ಸಹ ಕಾರಣವಾಗಿದೆ ಎಂದು ಸ್ಥಳಿಯರು ತಿಳಿಸಿದರು.
ಪಂಚನಾಮೆ: ಕೆರೆ ಒಡೆದ ವಿಷಯ ತಿಳಿಯುತ್ತಿದ್ದಂತೆ ಗ್ರಾಪಂ ಅಧ್ಯಕ್ಷೆ ರೇಖಾ ರಾಮನಗೌಡ ನಯನಾಪೂರ, ಪಿಡಿಒ ಬಸವರಾಜ ಬಳಗೋಡ ನೇತೃತ್ವದಲ್ಲಿ ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ ಕುಲಕರ್ಣಿ, ವೀರನಗೌಡ ಗೌಡರ ಕೆರೆ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ನಷ್ಟದ ಮಾಹಿತಿಯನ್ನು ಪಡೆದುಕೊಂಡರು. ಮಳೆ ಹಾನಿ ವರದಿಯನ್ನು ತಹಶೀಲ್ದಾರರಿಗೆ ನೀಡಲಾಗುವದು ಎಂದು ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ ಕುಲಕರ್ಣಿ ತಿಳಿಸಿದರು. ಈ ಸಂದರ್ಭದಲ್ಲಿ ತುಗ್ಗಲದೋಣಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Previous articleನನ್ನ ರುಂಡವೂ ಕಾಂಗ್ರೆಸ್‌ಗೆ ಹೋಗಲ್ಲ
Next articleಭಾರತಕ್ಕೆ 10 ವಿಕೆಟ್​ ಭರ್ಜರಿ ಜಯ