ಮೈಸೂರು: ಸದಸ್ಯರ ಒಳಿತಿಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹಲವು ಕರ‍್ಯಕ್ರಮಗಳನ್ನು ಜಾರಿ ಮಾಡಲಾಗಿದ್ದು ಈಗಾಗಲೇ ಸುಮಾರು ೧೫ರಿಂದ ೨೦ ಆಸ್ಪತ್ರೆಗಳಲ್ಲಿ ಮಹಾಸಭಾ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಅಲ್ಲದೇ ವಿವಿಧ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿಯೂ ಶುಲ್ಕ ರಿಯಾಯ್ತಿ ದಕ್ಕುತ್ತಿದೆ ಎಂದು ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಹೇಳಿದರು.
ಮೈಸೂರಿನ ಕೆಆರ್ ವನಂನಲ್ಲಿ ಭಾನುವಾರ ನಡೆದ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬ್ರಾಹ್ಮಣ ಸಮುದಾಯದ ಸದಸ್ಯರಿಗೆ ಅನುಕೂಲ ಕಲ್ಪಿಸಿಕೊಡುವುದು ನಮ್ಮ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾಸಭಾ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಸದ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮತ್ತು ವಿದ್ಯಾರ್ಥಿ ವೇತನ ಒದಗಿಸುವ ಕಾರ‍್ಯಕ್ರಮ ರೂಪಿಸಲಾಗುತ್ತಿದೆ. ಗುಲಬರ್ಗಾ, ಬೆಳಗಾವಿ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಕಾರ‍್ಯಕ್ರಮ ಆಯೋಜಿಸಲಾಗುವುದು, ಮೈಸೂರಿನಲ್ಲಿಯೂ ಕಾರ್ಯಕ್ರಮ ನಡೆಸುವ ಚಿಂತನೆಯಿದೆ ಎಂದರು.
ಇದೇ ವೇಳೆ ಸಂಘಕ್ಕೆ ವಯಕ್ತಿಕವಾಗಿ ಒಂದು ಲಕ್ಷ ಮತ್ತು ಮಹಾಸಭಾ ವತಿಯಿಂದ ೧೦ಸಾವಿರ ದೇಣಿಗೆ ನೀಡುವುದಾಗಿಯೂ ಅಧ್ಯಕ್ಷರು ಪ್ರಕಟಿಸಿದರು.