ಕಾರವಾರ: ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಗೃಹ ಪ್ರವೇಶಕ್ಕೆ ಯಾವಾಗಲೂ ಅವಕಾಶವಿದೆ. ಅವರ ಮನೆಗೆ ಅವರು ಬರುತ್ತಿದ್ದಾರೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬರುತ್ತೇನೆ ಎನ್ನುವವರಿಗೆ ಬರಬೇಡಿ ಎಂದು ಹೇಳಲು ಆಗುವುದಿಲ್ಲ. ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಸ್ಪರ್ಧಿಸಲು ನಮ್ಮಲ್ಲಿ ಹತ್ತು ಜನ ಅಭ್ಯರ್ಥಿಗಳು ಇದ್ದಾರೆ. ಶಿವರಾಮ ಹೆಬ್ಬಾರ ಅವರನ್ನು ಕರೆಸುವ ಅಗತ್ಯವಿಲ್ಲ. ಲೋಕಸಭೆಚುನಾವಣೆಗೆ ಜಿಲ್ಲೆಯಿಂದ ಕಾಂಗ್ರೆಸ್ಸಿನ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಹೀಗಾಗಿ ಶಿವರಾಮ ಹೆಬ್ಬಾರ ಅವರನ್ನು ಕರೆಸಿ ಅಭ್ಯರ್ಥಿಯಾಗಿಸುವ ಯೋಚನೆ ಇಲ್ಲ. ಸಂಸದ, ಸಚಿವ ಹಾಗೂ ಮುಖ್ಯಮಂತ್ರಿಯಾಗುವ ಆಸೆಯಿಂದ ಬರಬೇಡಿ, ಅಲ್ಲಿ ಸರಿಯಿಲ್ಲ ಎನ್ನಿಸಿದರೆ ಮಾತ್ರ ಬನ್ನಿ ಎಂದು ಹೆಬ್ಬಾರರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ನಾವಾಗಿಯೇ ಅವರಿಗೆ ಆಹ್ವಾನ ನೀಡಿಲ್ಲ. ಇದು ಅವರ ಮನೆ, ಎಂದಿಗೂ ಬಾಗಿಲು ತೆರೆದೇ ಇರುತ್ತದೆ. ಗೃಹಪ್ರವೇಶ ಮಾಡುವುದು ಅವರಿಗೆ ಬಿಟ್ಟಿದ್ದು ಎಂದರು.