ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದಾರೆ. ಹೀಗಾಗಿ ನಮಗೆ ಆಪರೇಶನ್ ಹಸ್ತ ಮಾಡುವ ಅನಿವಾರ್ಯತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ನೋಡಿ ತಾವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಅವರ ಬಗ್ಗೆ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಕೇವಲ ನೂರು ದಿನದಲ್ಲಿ ಈ ಮಹತ್ವದ ಯೋಜನೆ ಜಾರಿಗೆ ತರುವ ಮೂಲಕ ಕಾಂಗ್ರೆಸ್ ಐತಿಹಾಸಿಕ ಸಾಧನೆ ಮಾಡಿದೆ. ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು, ೧೩೬ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಪೂರ್ಣ ಬಹುಮತ ನೀಡಿದ್ದಾರೆ. ಜನರ ಆಶಯದಂತೆ ನೂರು ದಿನದೊಳಗೆ ಎಲ್ಲ ಭರವಸೆ ಈಡೇರಿಸುವ ಕೆಲಸ ಮಾಡಿದ್ದೇವೆ ಎಂದರು.