ಶ್ರೀರಂಗಪಟ್ಟಣ: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿನ ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ನೋಟುಗಳಿಂದ ಸಿಂಗರಿಸಲಾಗಿದ್ದ ಧನಲಕ್ಷ್ಮೀ ಅಲಂಕಾರ ಗಮನ ಸೆಳೆಯಿತು. ದೇವಾಲಯದ ಅರ್ಚಕ ಲಕ್ಷ್ಮೀಶ್ ನೇತೃತ್ವದಲ್ಲಿ ಅಮ್ಮನವರ ಮೂರ್ತಿಯನ್ನು ವಿಶೇಷ ವಸ್ತ್ರಗಳಿಂದ ಅಲಂಕರಿಸಿ, ಗರ್ಭಗುಡಿಯನ್ನು ವಿವಿಧ ಬಗೆಯ ನೋಟುಗಳಿಂದ ಸಿಂಗರಿಸಲಾಗಿತ್ತು. ನೋಟುಗಳಿಂದ ಸಿಂಗರಿಸಲಾಗಿದ್ದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು. ದೇವಿಗೆ ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.