ಘಟಪ್ರಭೆಗೆ ಭಾರೀ ಪ್ರಮಾಣದ ನೀರು

0
7
ಗೋಕಾಕ

ಗೋಕಾಕ: ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ಹಲವು ಸೇತುವೆ ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತರು ಸಂಬಂಧಿಕರು ಮತ್ತು ನೆಂಟರ ಮನೆಗೆ ಗಂಟು ಮೂಟೆ ಸಮೇತ ತೆರಳುತ್ತಿದ್ದಾರೆ.
ಹಿಡಕಲ್ ಜಲಾಶಯ, ಹಿರಣ್ಯಕೇಶಿ ಮತ್ತು ಬಳ್ಳಾರಿ ನಾಲಾ ಸೇರಿ 56 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಘಟಪ್ರಭೆಗೆ ಹರಿದು ಬರುತ್ತಿದ್ದು ಇನ್ನೂ 20 ಸಾವಿರ ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ನೀರು ಹರಿಬಿಡುವ ಸಾಧ್ಯತೆ ಇದೆ. ಈಗಾಗಲೇ ನಗರದ ಕುಂಬಾರಗಲ್ಲಿ, ಪಟಗುಂದಿ ಹನುಮಾನ ದೇವಸ್ಥಾನದ ಮತ್ತು ದಾಳಂಬ್ರಿ ತೋಟದಲ್ಲಿ ನದಿ ನೀರು ಸುತ್ತುವರೆದಿದ್ದು ಶಿಂಧಿಕೂಟ ಮತ್ತು ಮಾಂಸ ಮಾರುಕಟ್ಟೆವರೆಗೆ ನೀರು ಬರುವ ಸಂಭವವಿದೆ. ಪ್ರಮುಖ ಸೇತುವೆಗಳು ಜಲಾವೃತವಾಗುತ್ತಿವೆ.
ನಗರ ಮತ್ತು ತಾಲೂಕಿನ ನದಿ ತಟದಲ್ಲಿರುವ ಜಮೀನುಗಳಿಗೆ ನದಿ ನೀರು ನುಗ್ಗಿದ್ದು ಫಲವತ್ತಾದ ಬೆಳೆ ಹಾನಿ ಮತ್ತು ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿರುವ ಸಾಮಗ್ರಿಗಳು ನೀರು ಪಾಲಾಗಿವೆ. ಈಗಾಗಲೇ ನದಿ ನೀರಿನ ಮಟ್ಟ ಏರಿಕೆಯಿಂದ ತಾಲೂಕಿನ 5 ಸೇತುವೆಗಳು ಮುಳುಗಡೆಯಾಗಿದ್ದು ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಲೋಳಸೂರ ಸೇತುವೆ ಮುಳುಗಡೆಯಾಗಿದೆ. ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕಹೊಳಿ ಸೇತುವೆ ಮುಳುಗಡೆಯಾಗುವ ಹಂತದಲ್ಲಿದೆ.

ಗೋಕಾಕ
Previous articleವರುಣಾರ್ಭಟಕ್ಕೆ ಸಕ್ಕರೆ ನಾಡು ತತ್ತರ
Next articleಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸರ್ಕಾರ ಆದೇಶ