ಹಳೆ ಸರ್ಕಾರದ ವಿರುದ್ಧ ಶೇ.೪೦ ರಷ್ಟು ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರು ಚುನಾವಣೆಗೆ ಮುನ್ನ ಹೀರೋ ಆಗಿದ್ದರು. ಈಗ ಅದೇ ಗುತ್ತಿಗೆದಾರರು ವಿಲನ್ ರೀತಿ ಕಂಡು ಬರುತ್ತಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರದಿಂದ ಜನರು, ಬಹಳ ನಿರೀಕ್ಷೆಗಳನ್ನು ಹೊಂದಿದ್ದಾರೆ. ಸರ್ಕಾರ ೫ ಗ್ಯಾರಂಟಿಗಳನ್ನು ಜಾರಿಗೆ ತರಲು ಕ್ರಮ ಕೈಗೊಂಡಿದೆ. ಆದರೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ದೊಡ್ಡ ಸವಾಲು. ಹಿಂದಿನ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದವರು ಮಾಡಿದ್ದ ಶೇ.೪೦ ಕಮಿಷನ್ ಆರೋಪವನ್ನು ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿತು. ಆಗ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೀರೋ ರೀತಿ ಕಂಡರು. ಕಾಂಗ್ರೆಸ್ ನಾಯಕರು ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದರು. ಪೇ ಸಿಎಂ 'ಭಿತ್ತಿಪತ್ರ ಜನಪ್ರಿಯವಾಯಿತು. ಚುನಾವಣೆ ನಡೆದ ಮೇಲೆ ಹೊಸ ಸರ್ಕಾರ ಬಂದಿತು. ಸ್ವಲ್ಪ ಕಾಲ ಮೌನವಹಿಸಿದ್ದ ಅದೇ ಗುತ್ತಿಗೆದಾರರ ಸಂಘದವರು ಹೊಸ ಸರ್ಕಾರದ ವಿರುದ್ಧ ಆರೋಪ ಮಾಡಲು ಆರಂಭಿಸಿದ್ದಾರೆ. ಈಗ ಅದೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ವಿಲನ್ ರೀತಿ ಕಂಡು ಬರುತ್ತಿದ್ದಾರೆ. ಸರ್ಕಾರ ಬದಲಾಗಿದೆ, ಭ್ರಷ್ಟಾಚಾರ ಮಾತ್ರ ಹಾಗೇ ಇದೆ. ಭ್ರಷ್ಟಾಚಾರಕ್ಕೆ ಜಾತಿ, ಮತ, ಲಿಂಗ, ರಾಜಕೀಯ ಪಕ್ಷ ಸೇರಿದಂತೆ ಯಾವ ಭೇದವೂ ಇಲ್ಲ. ಅದು ಬ್ರಹ್ಮರಾಕ್ಷಸ. ಈ ಭ್ರಷ್ಟಾಚಾರದ ಪ್ರತಿನಿಧಿಗಳು ಪ್ರಗತಿಯ ಮುಖವಾಡ ಧರಿಸಿ ಹೊಸಬರಿಗೆ ಆಪ್ತರಾಗುತ್ತಾರೆ. ಪ್ರತಿ ಸಚಿವರ ಹಿಂದೆ ಇರುವ ವ್ಯಕ್ತಿಗಳನ್ನು ನೋಡಿ. ಆ ಮುಖಗಳೆಲ್ಲ ಹಳೆಯವೇ. ಹೀಗಾಗಿ ಬಹಳ ಉತ್ಸಾಹದಿಂದ ಮತ ಚಲಾಯಿಸಿದ ಜನರಿಗೆ ಬಹಳ ಬೇಗನೇ ಭ್ರಮನಿರಸನವಾಗುವುದು ಸಹಜ. ಹಿಂದೆ ಗುತ್ತಿಗೆದಾರರು ಸಚಿವರಿಗೆ ಪಾಲು ತಲುಪಿಸಿದರೂ ಗುಣಮಟ್ಟ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದರು. ಅದಕ್ಕೆ ನಿಷ್ಠಾವಂತ ಅಧಿಕಾರಿಗಳು ಕಾರಣರಾಗಿದ್ದರು. ವಿಶ್ವೇಶ್ವರಯ್ಯ ಕಾಲದ ಎಂಜಿನಿಯರಿಂಗ್ ತಲೆಮಾರು ಈಗ ಉಳಿದಿಲ್ಲ. ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗುವುದೇ ಕಡಿಮೆ. ಕಚೇರಿಯಲ್ಲಿ ಕುಳಿತೇ ಕಡತಕ್ಕೆ ಸಹಿ ಮಾಡುವ ಪ್ರವೃತ್ತಿಯೇ ಹೆಚ್ಚು. ನೀರಾವರಿ, ಲೋಕೋಪಯೋಗಿ, ವಿದ್ಯುತ್, ಗೃಹ ಮತ್ತು ಕಂದಾಯ ಇಲಾಖೆಗಳು ಭ್ರಷ್ಟಾಚಾರದ ಗಂಗೋತ್ರಿಗಳು. ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಯಾರಾದರೂ ಹೇಳಿದರೆ ಅವರಿಗೆ ಮತಿ ಭ್ರಮಣೆಯಾಗಿದೆ ಎಂದು ಜನರೇ ಹೇಳುತ್ತಾರೆ. ಈಗ ಗುತ್ತಿಗೆದಾರರು ಕಮಿಷನ್ ಕೊಡದೇ ಕಾಮಗಾರಿಯ ಟೆಂಡರ್ ಪಡೆಯಲು ಸಾಧ್ಯವೇ ಇಲ್ಲ. ಅದರಿಂದ ಕಾಮಗಾರಿ ಕೂಡ ಶೇ.೧೦೦ ರಷ್ಟು ಆಗೋಲ್ಲ. ರಾಜೀವಗಾಂಧಿ ಹಿಂದೆ ಹೇಳಿದಂತೆ ದೆಹಲಿಯಲ್ಲಿ ಬಿಡುಗಡೆಗೊಂಡ ಅನುದಾನದಲ್ಲಿ ಶೇ. ೧೦ ರಷ್ಟೂ ಹಳ್ಳಿಯನ್ನು ತಲುಪುವುದಿಲ್ಲ. ಇಂದಿರಾಗಾಂಧಿ ಕೂಡ ಭ್ರಷ್ಟಾಚಾರ ವಿಶ್ವವ್ಯಾಪಿ ಎಂದು ಹೇಳಿದ್ದರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರಕ್ಕೆ ಬಂದ ಜನತಾ ನಾಯಕರನ್ನು ಗಾಂಧಿ ಸಮಾಧಿ ಮುಂದೆ ಪ್ರಮಾಣ ಮಾಡಲು ಹೇಳಿದ ಜೆ.ಬಿ. ಕೃಪಲಾನಿ
ನಮ್ಮ ತಲೆ ಆಕಾಶದತ್ತ ನೋಡುತ್ತಿದೆ. ಆದರೆ ಕಾಲುಗಳು ಕೆಸರಿನಲ್ಲಿ ಹೂತುಹೋಗಿವೆ’ ಎಂದು ಎಚ್ಚರಿಸಿದ್ದರು. ಈಗ ಎಲ್ಲ ರಾಜಕೀಯ ನಾಯಕರ ಕಾಲು ಕೆಸರಿನಲ್ಲಿರುವುದು ಬಹಿರಂಗ ಸತ್ಯ. ಬುದ್ಧ ಹೇಳಿದಂತೆ ಸಾವಿಲ್ಲದ ಮನೆಯಿಂದ ಸಾಸುವೆ ತರುವುದಕ್ಕೆ ಆಗುವುದಿಲ್ಲ. ಅದೇರೀತಿ ಭ್ರಷ್ಟಾಚಾರ ಇಲ್ಲದ ಸರ್ಕಾರ ಕಾಣಲು ಸಾಧ್ಯವಿಲ್ಲ. ಕಡಿಮೆ ಭ್ರಷ್ಟರನ್ನು ಕಂಡು ಕೊಂಡರೆ ಅದೇ ಜನರ ಪುಣ್ಯ.
ಈಗ ಬಿಬಿಎಂಪಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಬಾಕಿ ಪಾವತಿಯಾಗುತ್ತಿಲ್ಲ. ಆ ಕಾಮಗಾರಿಗಳು ಎಷ್ಟು ಕಳಪೆ ಮಟ್ಟದ್ದು ಎಂಬುದನ್ನು ಜನಸಾಮಾನ್ಯರು ಕಣ್ಣಾರೆ ಕಂಡಿದ್ದಾರೆ. ಈ ಕಾಮಗಾರಿಯನ್ನು ಒಬ್ಬ ಅಧಿಕಾರಿಯೂ ಮೇಲ್ವಿಚಾರಣೆ ವಹಿಸಲಿಲ್ಲ ಎಂಬುದು ಸ್ಪಷ್ಟ. ಇದು ಬೆಂಗಳೂರಿನ ಕತೆ. ಉಳಿದ ಜಿಲ್ಲೆಗಳದ್ದು ಬೇರೆಯದೇನಲ್ಲ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳ ಪರಿಸ್ಥಿತಿಯೂ ಇದೆ. ಕೆಲವು ಕಡೆ ಭ್ರಷ್ಟಾಚಾರ ಕೇಂದ್ರೀಕೃತಗೊಂಡಿದೆ. ಅಲ್ಲಿ ಗುತ್ತಿಗೆದಾರರಿಗೆ ಅನುಕೂಲ. ಮಾಡಿದ ಕಾಮಗಾರಿಗೆ ಹಣ ಬಾರದೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದು ಮಳೆ ಬಾರದೆ ರೈತ ಆತ್ಮಹತ್ಯೆ ಮಾಡಿಕೊಳ್ಳುವಷ್ಟೇ ಸತ್ಯ. ಇದಕ್ಕೆ ಪರಿಹಾರ ಜನರೇ ಕಂಡುಕೊಳ್ಳಬೇಕು.