ನಮ್ಮವರಿಗೆ ನಾವೇ ವಿರೋಧಿಗಳು: ಡಿ.ಕೆ.ಮುರುಳೀಧರ್

0
6

ಕೊಪ್ಪಳ: ನಮ್ಮ ಸಮುದಾಯದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮವರಿಗೆ ನಾವೇ ವಿರೋಧಿಗಳಾಗುತ್ತಿದ್ದೇವೆ. ಆದರೆ ಇದನ್ನು ಬಿಡಬೇಕು. ಎಲ್ಲರಿಗೂ ಸಹಾಯ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಕೆ. ಮುರಳೀಧರ ಹೇಳಿದರು.

ನಗರದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಬ್ರಾಹ್ಮಣ ಸದಸ್ಯತ್ವ ಅಭಿಯಾನ ಮತ್ತು ಸಂಘಟನೆ ಕುರಿತು ಸಭೆಯಲ್ಲಿ ಅವರು ಮಾತನಾಡಿದರು‌.

ನಿಮ್ಮ ಮಠಗಳಿಗೆ ಅನುಗುಣವಾಗಿ ಸಂಪ್ರದಾಯಗಳ ಆಚರಣೆ ಮನೆಗೆ ಸೀಮಿತಗೊಳಿಸಿ ನಾನು ಬ್ರಾಹ್ಮಣ ಎನ್ನುವುದನ್ನು ಸಾರ್ವತ್ರಿಕವಾಗಿ ಗಟ್ಟಿಯಾಗಿ ಪ್ರತಿಪಾದಿಸಿದರೆ ಮಾತ್ರ ನಮ್ಮ ಸಮಾಜ ಸಂಘಟಿತವಾಗಲು ಸಾಧ್ಯ. ಆಗ ಎಲ್ಲ ರೀತಿಯಿಂದಲೂ ಸ್ಥಾನಮಾನಗಳು ಲಭಿಸುತ್ತವೆ. ಆದ್ದರಿಂದ ಬ್ರಾಹ್ಮಣ ಎನ್ನುವುದೇ ಮೊದಲಾಗಬೇಕು ಎಂದರು.

ನಾವೆಲ್ಲ ಒಂದಾಗಿ ಸಂಘಟನೆ ಮಾಡಿದರೆ ಚುನಾವಣೆ ಸಮಯದಲ್ಲಿ ನಮ್ಮ ಶಕ್ತಿ ತೋರಿಸಲು ಸಾಧ್ಯವಾಗುತ್ತದೆ. ಕಡ್ಡಾಯವಾಗಿ ಮತ ಹಾಕಿದರೆ ಮಾತ್ರ ಬ್ರಾಹ್ಮಣ ಸಮುದಾಯವೂ ಮತಬ್ಯಾಂಕ್‌ ಆಗಿ ಬೆಳೆಯಲು ಸಾಧ್ಯ. ಸಮಾಜದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ವಿದ್ಯಾನಿಧಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಮಟ್ಟದಲ್ಲಿಯೂ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

ಸಮಾಜದ ಮುಖಂಡ ವಸಂತ ಪೂಜಾರ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಸಂಘಟನೆ ಬಲಗೊಂಡರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಂಘಟನೆಯಿಂದ ನನಗೇನು ಲಾಭ ಎನ್ನುವುದಕ್ಕಿಂತ, ಸಂಘಟನೆಗಾಗಿ ನಾನು ಎನ್ನುವ ಭಾವನೆ ಬೆಳೆಸಿಕೊಳ್ಳಿ. ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ರಾಹ್ಮಣರು ಅಳಿವಿನಂಚಿಗೆ ಸಾಗುತ್ತಿದ್ದು, ನಮ್ಮ ಸಮುದಾಯ ಉಳಿವಿಗೆ ಒಂದಾಗುವುದು ಅಗತ್ಯವಾಗಿದೆ ಎಂದರು.

ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ವಿಜಯ್‌ ನಾಡಜೋಶಿ, ರಾಜ್ಯ ಉಪಾಧ್ಯಕ್ಷ ಆನಂದ್‌ ಪಡ್ನಿಸ್‌, ರಾಮರಾವ್‌ ಗಣಕಲ್‌, ರಾಯಚೂರಿನ ವಿನೋದ ಕಕ್ಕೇರಿ, ಸಮಾಜದ ಮುಖಂಡರಾದ ಜಗನ್ನಾಥ ಹುನಗುಂದ, ರಾಘವೇಂದ್ರ ಜಹಗೀರದಾರ, ಕೆ.ಜಿ. ಕುಲಕರ್ಣಿ, ಗುರುರಾಜ ಕುಲಕರ್ಣಿ, ಅನಿಲ ಕುಲಕರ್ಣಿ, ರಮೇಶ್ ಜಹಗೀರದಾರ್‌, ವೇಣುಗೋಪಾಲ್ ಆಚಾರ್ ಜಹಗೀರದಾರ್ ಇದ್ದರು.

Previous articleಬೆಳಗಾವಿಯಲ್ಲಿ ಮತ್ತೆ ಚಿರತೆ: ವಿಡಿಯೋ ವೈರಲ್‌
Next articleರಾಯಚೂರಿಗೆ ಟೆಕ್ಸ್‌ಟೈಲ್‌ ಪಾರ್ಕ್‌