ಬಾಣಂತಿ ಸಾವು: ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

0
7
ಸಾವು

ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಣಂತಿ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಗೆ ಕುಟುಂಬಸ್ಥರು ಮತ್ತು ವಿಶ್ವಕರ್ಮ ಸಮುದಾಯದ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮೂಡಬಿದಿರೆ ಮೂಲದ ಶಿಲ್ಪಾ ಆಚಾರ್ಯ ಮೃತಪಟ್ಟ ಬಾಣಂತಿ. ಜುಲೈ ೨ರಂದು ಹೆರಿಗೆ ನೋವು ಹಿನ್ನೆಲೆ ಶಿಲ್ಪಾ ಆಸ್ಪತ್ರೆಗೆ ದಾಖಲಾಗಿದ್ದರು. ಶಿಲ್ಪಾ ಅವರನ್ನು ಪರೀಕ್ಷೆ ನಡೆಸುತ್ತಿದ್ದ ವೈದ್ಯರು ಭಾನುವಾರ ರಜೆ ಇದ್ದಿದ್ದರಿಂದ ಬೇರೊಬ್ಬರು ಹೆರಿಗೆ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಕೋಮಾಕ್ಕೆ ಜಾರಿದ್ದರು. ಜುಲೈ ೨೫ರಂದು ಶಿಲ್ಪಾ ಸಾವನ್ನಪ್ಪಿದ್ದಾಗಿ ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆರೋಗ್ಯವಾಗಿಯೇ ಇದ್ದ ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗುತ್ತಿತ್ತು, ಈ ವೇಳೆ ಆಸ್ಪತ್ರೆ ಬಳಿ ಮೃತದೇಹ ತಡೆದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಗೆ ಬರುವ ಅಂಬುಲೆನ್ಸ್‌ನ್ನು ತಡೆಯಲಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟ ತಳ್ಳಾಟ ನಡೆದಿದೆ. ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

Previous articleಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ: ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ
Next articleಕಷ್ಣಾನದಿ ತೀರದಲ್ಲಿ ಮೊಸಳೆಗಳ ಹಿಂಡು ಪ್ರತ್ಯಕ್ಷ