ಮಾತಿನ ಮಂಟಪದಲ್ಲಿ ಮಾತಿಗೆ ಬಂದಿತು ಬರ

0
23
ಸಂಪಾದಕೀಯ

ಸಾರ್ವಜನಿಕರ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡು ಹಿಡಿಯಲು ಇರುವುದು ಶಾಸನಸಭೆ. ಈಗ ಈ ಮಾತಿನ ಮನೆ ತೋಳುಬಲದ ಪ್ರದರ್ಶನಕ್ಕೆ ಆಖಾಡವಾಗಿ ಪರಿವರ್ತನೆಗೊಂಡಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ ಅಡಳಿತದಲ್ಲಿದ್ದವರು ಈಗ ಪ್ರತಿಪಕ್ಷದಲ್ಲಿದ್ದಾರೆ. ಆಗ ಪ್ರತಿಪಕ್ಷದಲ್ಲಿದ್ದವರು ಈಗ ಆಡಳಿತದಲ್ಲಿದ್ದಾರೆ. ಇಬ್ಬರಲ್ಲೂ ಮಾತಿಗೆ ಬರ. ಪರಸ್ಪರ ಆರೋಪ- ಪ್ರತ್ಯಾರೋಪವೇ ಇಡೀ ಕಲಾಪವನ್ನು ನುಂಗಿಹಾಕುತ್ತಿದೆ. ಜನಾದೇಶದಿಂದ ಆಡಳಿತದಲ್ಲಿ ಬದಲಾವಣೆ ಬರುತ್ತದೆ ಎಂದು ನಿರೀಕ್ಷಿಸಿದ್ದ ಜನರಿಗೆ ಈಗ ನಿರಾಸೆಯಾಗುತ್ತಿರುವುದು ಸಹಜ. ಈಗ ಮತದಾರ ಅಸಹಾಯಕ, ಶಾಸನಸಭೆ ಕಲಾಪಕ್ಕೆ ಆತ ಮೂಕ ಪ್ರೇಕ್ಷಕ. ಬಿಜೆಪಿ ಮಂಡಿಸಿದ್ದ ಬಜೆಟ್‌ಗೆ ಪರ್ಯಾಯವಾಗಿ ಕಾಂಗ್ರೆಸ್‌ನಿಂದ ಮತ್ತೊಂದು ಬಜೆಟ್ ಮಂಡನೆ. ಹಿಂದಿನ ಸರ್ಕಾರ ಏನೂ ಮಾಡಿಲ್ಲ. ಸಾಲದ ಭಾರ ಹೆಚ್ಚಾಗಿದೆ ಎಂಬುದು ಈಗಿನ ಸರ್ಕಾರದ ಆರೋಪ. ಈಗಿನ ಸರ್ಕಾರ ೫ ಗ್ಯಾರಂಟಿಗಳಿಗೆ ಹಣ ಒದಗಿಸುವುದೇ ದೊಡ್ಡ ಕಸರತ್ತು ಎಂಬುದು ಪ್ರತಿಪಕ್ಷದ ನಿಲುವು. ಇಂಥ ಸಂದರ್ಭದಲ್ಲಿ ಶಾಸನಸಭೆಯಲ್ಲಿ ಚರ್ಚೆಗಳು ಅರ್ಥಪೂರ್ಣವಾಗಿ ನಡೆಯಬೇಕು. ಹಿಂದೆ ಮುಖ್ಯಮಂತ್ರಿ ಹೇಳುವ ಮಾತಿಗಿಂತ ಪ್ರತಿಪಕ್ಷದ ನಾಯಕ ನೀಡುವ ಸಲಹೆಗಳಿಗೆ ಬೆಲೆ ಇತ್ತು. ಅವುಗಳನ್ನು ಹೊಸ ಕಾಯ್ದೆಗೆ ನಿಯಮ ರಚಿಸುವಾಗ ಬಳಸಿಕೊಳ್ಳುವುದು ವಾಡಿಕೆಯಾಗಿತ್ತು. ಈಗ ಮುಖ್ಯಮಂತ್ರಿ-ಪ್ರತಿಪಕ್ಷದ ನಾಯಕರ ಮಾತಿಗೆ ಬೆಲೆಯೇ ಇಲ್ಲ. ಪ್ರತಿಪಕ್ಷದ ನಾಯಕರೇ ಇಲ್ಲ ಎಂದ ಮೇಲೆ ಬೇರೆ ಏನನ್ನೂ ಹೇಳುವ ಅಗತ್ಯವಿಲ್ಲ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಬಿಜೆಪಿ ವಿರೋಧಿ ಪಕ್ಷಗಳ ಸಮ್ಮಿಲನಕ್ಕೆ ಐಎಎಸ್ ಅಧಿಕಾರಿಗಳ ಸೇವೆಯನ್ನು ಬಳಸಿಕೊಂಡಿದ್ದು ಶಿಷ್ಟಾಚಾರದ ಉಲ್ಲಂಘನೆ ಎಂಬುದು ಪ್ರತಿಪಕ್ಷದ ಆರೋಪ. ಮುಖ್ಯಮಂತ್ರಿಯಿಂದ ಸಮರ್ಥನೆ. ಇಂಥ ಸಂದರ್ಭದಲ್ಲಿ ಜನ ನಿರೀಕ್ಷಿಸುವುದು ಉತ್ತಮ ಚರ್ಚೆ ಮತ್ತು ನಿರ್ಣಯ. ತಪ್ಪು ಯಾರೇ ಮಾಡಿರಲಿ ಅದರ ಬಗ್ಗೆ ಪರ- ವಿರೋಧ ಚರ್ಚೆ ನಡೆಯಬೇಕು. ಕೊನೆಗೆ ತೀರ್ಮಾನವನ್ನು ಜನರ ಮುಂದಿಡಬೇಕು. ಪ್ರತಿಪಕ್ಷದವರು ಚರ್ಚೆ ಮಾಡದೇ ನೇರವಾಗಿ ಸ್ಪೀಕರ್ ಪೀಠದ ಮುಂದೆ ಸೇರಿ ಸರ್ಕಾರಿ ಕಾಗದಪತ್ರಗಳನ್ನು ಹರಿದು ಪೀಠದಲ್ಲಿದ್ದ ಉಪಸಭಾಪತಿಯ ಮೇಲೆ ಎಸೆಯುವುದು ಸರ್ವಥಾ ಸರಿಯಲ್ಲ. ಸ್ಪೀಕರ್ ಸಭೆಗೆ ಬಂದ ಕೂಡಲೇ ತರಾತುರಿಯಲ್ಲಿ ಪ್ರತಿಪಕ್ಷದ ೧೦ ಶಾಸಕರನ್ನು ಅಮಾನತುಗೊಳಿಸಿದ್ದು ಚರ್ಚೆಗೆ ಇದ್ದ ಒಂದೇ ಒಂದು ಅವಕಾಶವನ್ನು ಬಂದ್ ಮಾಡಿದಂತಾಯಿತು.
ಈಗ ಪ್ರತಿಪಕ್ಷದವರು ವಿಧಾನಸೌಧದ ಹೊರಗೆ ಗಾಂಧಿ ಪ್ರತಿಮೆ ಮುಂದೆ ಕುಳಿತು ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ಮೇಲ್ಮನೆಯಲ್ಲಿ ಪ್ರತಿಪಕ್ಷದ ಸದಸ್ಯರ ಸಾಮೂಹಿಕ ಗೈರು ಹಾಜರಿಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಉತ್ತರಿಸಿದ್ದಾರೆ. ಇದನ್ನು ವಿಧಾನಮಂಡಲದ ಕಲಾಪ ಎಂದು ಕರೆಯುಲು ಸಾಧ್ಯವೇ? ಶಾಸನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದವರಿಗೆ ಸಮಾನ ಅವಕಾಶಗಳಿವೆ. ಆದರೆ ಈಗ ನಡೆಯುತ್ತಿರುವುದನ್ನು ನೋಡಿದರೆ ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ತಮ್ಮ ಕರ್ತವ್ಯದಿಂದ ವಿಮುಖರಾಗಿದ್ದಾರೆ ಎಂಬುದು ಸ್ಪಷ್ಟ. ಹಿಂದೆ ನೀವು ಮಾಡಿದ್ದೀರಿ, ಅದನ್ನು ಈಗ ನಾವು ಮಾಡುತ್ತಿದ್ದೇವೆ ಎಂಬ ಸಮರ್ಥನೆ ಎಲ್ಲ ಕಡೆ ಕೇಳಿ ಬರುತ್ತಿದೆ. ಅದರಿಂದ ಉಪಯೋಗವೇನೂ ಆಗುವುದಿಲ್ಲ. ಹೊಸದಾಗಿ ವಿಧಾನಸಭೆ ಪ್ರವೇಶಿಸಿದ ಶಾಸಕರಿಗಂತೂ ಈ ಎಲ್ಲ ಘಟನೆಗಳು ಶಾಕ್ ನೀಡಿರುವುದಂತೂ ನಿಜ. ಸಂವಿಧಾನ ರಚಿಸಿದ ಹಿರಿಯರು ಇಂಥ ಘಟನೆಗಳು ಮುಂದೆ ನಡೆಯಬಹುದು ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅದರಲ್ಲೂ ಸ್ಪೀಕರ್ ಹುದ್ದೆ ಎಂದರೆ ಯಾರಿಗೂ ಬೇಡದ ಕೂಸು.
ಹಿಂದೆ ನೆಹರೂ ಕಾಲದಲ್ಲಿ ಅವರ ಭಾಷಣಕ್ಕೆ ಇಡೀ ಸಂಸತ್ತು ಕಿವಿಗೊಟ್ಟು ಕೇಳುತ್ತಿತ್ತು. ಅದೇರೀತಿ ರಾಮಮನೋಹರ ಲೋಹಿಯಾ ಮಾತಿಗೂ ಮಹತ್ವ ಇತ್ತು. ವಾಜಪೇಯಿ ಪ್ರತಿಪಕ್ಷದ ನಾಯಕರಾಗೇ ಜನಪ್ರಿಯಗೊಂಡವರು. ಇಂದು ಯಾರ ಮಾತಿಗೂ ಬೆಲೆ ಇಲ್ಲ. ಈಗ ಕೂಗಾಟ- ಹಾರಾಟವೇ ಪ್ರಧಾನ ಎಂಬ ಭಾವನೆ ಮೂಡಿದೆ.

Previous articleಹುಬ್ಬಳ್ಳಿ ವಕೀಲರ ಸಂಘಕ್ಕೆ ಎಂ.ಎಸ್. ಬಾಣದ ನೂತನ ಅಧ್ಯಕ್ಷ
Next articleಮೃಗೀಯ ಕೃತ್ಯ ಎಂದಿಗೂ ಸಲ್ಲದು