ರೈಲು‌ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

0
9

ಖಾನಾಪುರ: ಚಲಿಸುತ್ತಿದ್ದ ರೈಲು ಹತ್ತುವ ಸಂದರ್ಭದಲ್ಲಿ ಕಾಲು ಜಾರಿ ಹಳಿಗಳ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ಲೋಂಡಾ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಲೋಂಡಾ ನಿವಾಸಿ ಸದ್ದಾಂ ಶಬ್ಬೀರ ಸೋಲಾಪುರಿ (೩೦) ಮೃತ ದುರ್ದೈವಿ.
ಮೃತ ಸದ್ದಾಂ ಲೋಂಡಾ ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ರೈಲುಗಳಲ್ಲಿ ಚಹಾ-ಕಾಫಿ ಮಾರುತ್ತಿದ್ದರು. ಭಾನುವಾರ ಮಧ್ಯಾಹ್ನ ಚಲಿಸುತ್ತಿದ್ದ ರೈಲಿನ ಒಂದು ಬೋಗಿಯಿಂದ ಇಳಿದು ಮತ್ತೊಂದು ಬೋಗಿಯನ್ನು ಹತ್ತುವ ಭರದಲ್ಲಿ ಅವರ ಕಾಲು ಜಾರಿ ನಿಲ್ದಾಣದ ಪ್ಲಾಟ್ ಫಾರ್ಮ್ ನಿಂದ ಹಳಿಗಳು ಮತ್ತು ಪ್ಲಾಟದ ಫಾರ್ಮ್ ನ ಗೋಡೆಗಳ ಮಧ್ಯದಲ್ಲಿ ಸಿಲುಕಿದ್ದರು. ಆಗ ರೈಲು‌ ಇವರ ದೇಹವನ್ನು ತಿಕ್ಕಿಕೊಂಡು‌ ಹೋಗಿದ್ದರಿಂದ ಗಂಭೀರವಾದ ಗಾಯಗಳಾಗಿ ನರಳಿದ್ದರು.
ಘಟನೆಯ ಬಳಿಕ ಸ್ಥಳೀಯರು ಮತ್ತು ರೈಲ್ವೆ ಸ್ಟೇಷನ್ ಸಿಬ್ಬಂದಿ ಅವರನ್ನು ರಕ್ಷಿಸಿ ಪ್ರಥಮೋಪಚಾರ ನೀಡಿದ್ದರು. ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದದ್ದರಿಂದ ಅಂಬ್ಯುಲನ್ಸ್ ವಾಹನಕ್ಕಾಗಿ ೧೦೮ ಸಂಖ್ಯೆಗೆ ಕರೆ ಮಾಡಿದ್ದರು. ಕರೆ‌ ಮಾಡಿ ೨ ಗಂಟೆಗಳು ಕಳೆದರೂ ಅಂಬುಲನ್ಸ್ ಬಾರದ್ದರಿಂದ ಅವರನ್ನು ಖಾಸಗಿ ವಾಹನದಲ್ಲಿ ಖಾನಾಪುರ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಷ್ಟರಲ್ಲೇ ಅವರು ವಿಪರೀತ ರಕ್ತಸ್ರಾವವಾಗಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಲೋಂಡಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಭಾನುವಾರ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ. ಖಾನಾಪುರ-ಲೋಂಡಾ ರಸ್ತೆ ಹದಗೆಟ್ಟ ಕಾರಣ ಸಕಾಲದಲ್ಲಿ ಅಂಬುಲನ್ಸ್ ಸಹ ಬರುವುದಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಚಹಾ-ಕಾಫಿ ಮಾರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಬಡ ಜೀವ ಸಾವನ್ನಪ್ಪಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸದ್ದಾಂ ಅವರ ಸಾವಿನ ನೈತಿಕ ಹೊಣೆಯನ್ನು ಹೊತ್ತು ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಲೋಂಡಾ ಗ್ರಾಮಸ್ಥ ಹಾಗೂ ಮಾಜಿ ಜಿಪಂ‌ ಸದಸ್ಯ ಬಾಬುರಾವ್ ದೇಸಾಯಿ ಆಗ್ರಹಿಸಿದ್ದಾರೆ.

Previous articleಜನ್ಮ-ಮರಣ, ಪುಣ್ಯ-ಪಾಪಗಳಿಲ್ಲದ ಸ್ಥಿತಿ
Next articleಬೆಳ್ಳಿತೆರೆಗೆ ಈ ವಾರ ಅಷ್ಟ ಚಿತ್ರಗಳು