ಹುಬ್ಬಳ್ಳಿ : ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಬ್ರಗಾಂಜಾ ಘಾಟ್ ಬಳಿಯ ದೂದಸಾಗರ್ – ಸೊನೌಲಿಮ್ ನಡುವಿನ ರೈಲ್ವೆ ಮಾರ್ಗದ ಹಳಿಗಳ ಮೇಲೆ ಬಿದ್ದಿದ್ದ 10-15 ಕಲ್ಲುಗಳನ್ನು ತೆರವುಗೊಳಿಸಲಾಗಿದ್ದು, ರವಿವಾರ ರಾತ್ರಿ 8.15 ರ ಹೊತ್ತಿಗೆ ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ಹಳಿ ಮೇಲೆ ಬಿದ್ದಿದ್ದ ಕಲ್ಲುಗಳ ಜೊತೆಗೆ ಬೋಲ್ಡರ್ಸ್,ಕಲ್ಲಿನ ಚೂರುಗಳನ್ನು ಎಂಜಿಯರ್ ತಂಡವು ತೆರವುಗೊಳಿಸಿದ್ದು, ರೈಲು ಸಂಚಾರ ಆರಂಭವಾಗಿದೆ ಎಂದು ತಿಳಿಸಲಾಗಿದೆ.
ರವಿವಾರ ಸಂಜೆ 6 ಗಂಟೆ ಹೊತ್ತಿಗೆ ಇದ್ದಕ್ಕಿದ್ದಂತೆಯೇ 10-15 ಕಲ್ಲುಗಳು, ಕಲ್ಲಿನ ಚೂರುಗಳು ದೂದಸಾಗರ್ – ಸೊನೌಲಿಮ್ ಈ ಮಾರ್ಗದಲ್ಲಿನ ( 39/200 ಕಿ.ಮೀ) ರೈಲ್ವೆ ಹಳಿ ಮೇಲೆ ಬಿದ್ದಿದ್ದವು. ವಿಷಯ ತಿಳಿಯುತ್ತಿದ್ದಂತೆಯೇ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸಂಚಾರ ತಡೆಯಲಾಗಿತ್ತು. ವಾಸ್ಕೋ ಡ ಗಾಮಾ – ಹಜರತ್ ನಿಜಾಮುದ್ದೀನ್ ಗೋವಾ ಸೂಪರ್ ಫಾಸ್ಟ್ ರೈಲನ್ನು ಸೊನೌಲಿಮ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು.
ಎಂಜಿನಿಯರ್ ತಂಡವು ಸ್ಥಳಕ್ಕೆ ದೌಡಾಯಿಸಿ ತ್ವರಿತ ಕಾರ್ಯಾಚರಣೆ ನಡೆಸಿ ಹಳಿಗಳ ಮೇಲೆ ಬಿದ್ದಿದ್ದ ಕಲ್ಲುಗಳನ್ನು ತೆರವು ಗೊಳಿಸಿತು. ಬಳಿಕ ಎಲ್ಲ ಸುರಕ್ಷಾ ಅಂಶಗಳನ್ನು ಪರೀಕ್ಷಿಸಿದ ಬಳಿಕ ಈ ಮಾರ್ಗದಲ್ಲಿ ರಾತ್ರಿ 8.15 ರ ಬಳಿಕ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.