ಹುಬ್ಬಳ್ಳಿ: ಚಿಕ್ಕೋಡಿ ಕಾಮಕುಮಾರ ನಂದಿ ಸ್ವಾಮೀಜಿ ಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿಯವರು ಆಗ್ರಹಿಸುತ್ತಿದ್ದಾರೆ. ಸಿಬಿಐ ಎನ್ನುವುದು ಬುರುಡೆ. ಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸುತ್ತಿರುವ ಬಿಜೆಪಿಗರು ಸಾಚಾಗಳಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಇಲ್ಲಿನ ವರೂರ ಜೈನ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿ ಗುಣಧರನಂದಿ ಸ್ವಾಮೀಜಿಗೆ ಧೈರ್ಯ ತುಂಬಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಹಲವು ಹಿಂದು ಕಾರ್ಯಕರ್ತರ ಕೊಲೆಗಳಾಗಿವೆ. ಅವುಗಳನ್ನು ಸಿಬಿಐ ತನಿಖೆಗೆ ನೀಡಿದ್ದರು. ಆ ಪ್ರಕರಣಗಳ ತನಿಖೆ ಎಲ್ಲಿಗೆ ಬಂತು ಎಂಬುದು ಜನರಿಗೆ ಗೊತ್ತಿದೆ ಎಂದರು.
ಈ ವರೆಗೆ ೨೨ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಲಾಗಿದೆ. ಆ ಪ್ರಕರಣಗಳಿಗೆ ನ್ಯಾಯ ಸಿಕ್ಕಿದೆಯಾ?, ಪರೇಶ್ ಮೇಸ್ತಾ ಕೊಲೆ ಪ್ರಕರಣ ಏನಾಯಿತು. ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಏನೇನೋ ಹೇಳುತ್ತಾರೆ. ರಾಜಕಾರಣಿಗಳು ನಿರ್ಲಜ್ಜರು. ತಾವು ರಾಜಕಾರಣಕ್ಕೆ ಏಕೆ ಬಂದಿದ್ದಾರೆ ಎಂಬ ಅರಿವು ಅವರಿಗೆ ಇರಬೇಕು. ನಾನು ಹಿಂದುತ್ವ ಉಳಿಸುವ ನಿಟ್ಟಿನಲ್ಲಿ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಹೇಳಿದರು.