ಅವಿಭಜಿತ ದ. ಕ. ಜಿಲ್ಲೆಯಲ್ಲಿ ಮಳೆ ಆರ್ಭಟ: ನಾಲ್ವರು ಸಾವು

0
11

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನಿರಂತರ ಮಳೆಗೆ ಉಭಯ ಜಿಲ್ಲೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಹವಾಮಾನ ಇಲಾಖೆಯು ಇಂದು ರೆಡ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಯ ಶಾಲೆ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಉಳ್ಳಾಲ ಸಮೀಪದ ಪಿಲಾರಿನಲ್ಲಿ ಮನೆ ಸಂಪರ್ಕಿಸುವ ಮೋರಿ ದಾಟುವ ವೇಳೆ ಜಾರಿ ಬಿದ್ದು ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಸುರೇಶ್ ಗಟ್ಟಿ (೫೨) ಎಂಬವರು ನೀರಿಗೆ ಬಿದ್ದು ಮೃತಪಟ್ಟರೆ, ಬೆಳಗ್ಗೆ ಕೆಲಸಕ್ಕೆಂದು ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಹೋಗುತ್ತಿದ್ದಾಗ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಸ್ಪರ್ಶಿಸಿ ಸುರತ್ಕಲ್ ಬಳಿಯ ಕುಳಾಯಿ ನಿವಾಸಿ ಸಂತೋಷ್ ಮೃತಪಟ್ಟಿದ್ದಾರೆ.
ಭಾರೀ ಮಳೆ ಬೀಳುತ್ತಿರುವ ಸಂದರ್ಭ ಬೈಕ್‌ನಲ್ಲಿ ಬರುತ್ತಿದ್ದ ಕುಂದಾಪುರ ಉಳ್ತೂರು ಗ್ರಾಮದ ವಿಠಲ ಶೆಟ್ಟಿ ಪುತ್ರ ದಿನಕರ ಶೆಟ್ಟಿ (೫೩) ಬೈಕ್ ಸ್ಕಿಡ್ ಆಗಿ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುಂದಾಪುರ ಯಡಮೊಗೆ ಗ್ರಾಮದ ಶೇಷಾದ್ರಿ ಐತಾಳ (೭೩) ಕುಬ್ಜಾನದಿ ಕಾಲುಸಂಕ ದಾಟುತ್ತಿರುವಾಗ ಆಯತಪ್ಪಿ ನೀರಿಗೆ ಬಿದ್ದು ಮೃತರಾಗಿದ್ದಾರೆ.
ನಿರಂತರ ಮಳೆಯಾಗುತ್ತಿರುವುದರಿಂದ ಉಭಯ ಜಿಲ್ಲೆಯ ಜೀವನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ವ್ಯಾಪಕ ಹಾನಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಿಂದ ವ್ಯಾಪಕ ಹಾನಿಯಾಗಿದೆ. ಕೃತಕ ನೆರೆಯಿಂದ ಮನೆಗಳು ಜಲಾವೃತಗೊಂಡ, ಅಲ್ಲಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವ, ವಾಹನಗಳು ಜಖಂಗೊಂಡಿರುವ ಘಟನೆಗಳು ನಡೆದಿದೆ. ವ್ಯಾಪಕ ಮಳೆಗೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೆದ್ದಾರಿಗಳಲ್ಲಿ ಅಲ್ಲಲಿ ಗುಡ್ಡ ಕುಸಿತದ ಘಟನೆಗಳು ನಡೆದಿದೆ. ವಿದ್ಯುತ್ ಹಾಗೂ ಅಂತರ್ಜಾಲ ಸೇವೆಗಳು ವ್ಯತ್ಯಯಗೊಂಡಿದೆ.
ಕಡಲ್ಕೊರೆತ : ಗಾಳಿ ಮಳೆಗೆ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಪಡುಬಿದ್ರಿ, ಉಚ್ಚಿಲ, ಮರವಂತೆ ಮೊದಲಾದೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಅಬ್ಬರಿಸುತ್ತಿರುವ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇಂದು ಬೆಳಗ್ಗಿನ ೮.೩೦ರ ತನಕ ಕಳೆದ ೨೪ ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೧೨೦ ಮಿ. ಮೀ. ಮಳೆಯಾದರೆ, ೧೦೧.೩ ಮಿಲಿ ಮೀಟರ್ ಮಳೆಯಾಗಿದೆ.

Previous articleಕ್ಯಾನ್ಸರ್‌ ಪೀಡಿತ ಪುಟಾಣಿ ಅಭಿಮಾನಿಯನ್ನ ಭೇಟಿ ಮಾಡಿದ ಕಿಚ್ಚ
Next articleಹು- ಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಭರತ್ ಎಸ್ ನೇಮಕ