ಬಿಜೆಪಿ ನಾಯಕರಿಂದ ಕೇವಲ ಬಿಟ್ಟಿ ಉಪದೇಶ

0
10
siddu

ಬೆಂಗಳೂರು: ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಬಿಜೆಪಿ ಒತ್ತಾಯಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು 5 ಕೆಜಿ ಅಕ್ಕಿ ಕೊಡಿ, ಉಳಿದ 5 ಕೆಜಿ ಅಕ್ಕಿ ಕೊಡಲು ಆಗದಿದ್ರೆ ಹಣ ಕೊಡಿ ಎಂದು ನಮಗೆ ಬಿಟ್ಟಿ ಉಪದೇಶ ನೀಡುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮುಂತಾದ ಬಿಜೆಪಿ ನಾಯಕರು ಒಂದು ಬಾರಿಯೂ ಇದು ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮ, ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲ್ಲ. ಇದು ರಾಜ್ಯ ಬಿಜೆಪಿ ನಾಯಕರ ನೈಜ ಮುಖ. ಅವರಿಗೆ ಬಡವರಿಗೆ ಅಕ್ಕಿ ನೀಡುವುದಕ್ಕಿಂತ ಅನ್ನಭಾಗ್ಯ ಕಾರ್ಯಕ್ರಮ ಜಾರಿಯಾಗಬಾರದು ಎಂಬುದರಲ್ಲೇ ಹೆಚ್ಚು ಖುಷಿ ಸಿಗುತ್ತದೆ.

ನಾನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದೆ, ಮುನಿಯಪ್ಪ ಅವರು ಕೇಂದ್ರ ಸಚಿವ ಪಿಯೂಶ್ ಗೊಯೆಲ್ ಅವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೆವು. ಎನ್‌ಸಿಸಿಎಫ್, ನಫೆಟ್ ಹಾಗೂ ಕೇಂದ್ರೀಯ ಭಂಡಾರಗಳನ್ನು ಸಂಪರ್ಕಿಸಿದ್ದೆವು. ಅವರು ಕೂಡ ಹೆಚ್ಚು ಬೆಲೆ ನಮೂದಿಸಿದರು. ಆದ್ದರಿಂದ ನಾವು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ.

ನಾವು ಜುಲೈ ಒಂದರಿಂದ ಬಡವರಿಗೆ 10 ಕೆಜಿ ಆಹಾರಧಾನ್ಯ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೆವು. ನಮಗೆ ಹೆಚ್ಚುವರಿಯಾಗಿ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿರುವುದರಿಂದ ಇಷ್ಟು ಪ್ರಮಾಣದ ಅಕ್ಕಿಯನ್ನು ಬೇರೆ ರಾಜ್ಯಗಳು ನೀಡಲು ಸಿದ್ಧವಿಲ್ಲವರುವುದರಿಂದ ನಾವು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆದು ಅಕ್ಕಿ ಪೂರೈಕೆಯಾಗುವ ವರೆಗೆ 5 ಕೆ.ಜಿ ಅಕ್ಕಿಯ ಬದಲಿಗೆ ಪ್ರತಿ ಕೆ.ಜಿ ಗೆ ರೂ. 34 ನಂತೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ.

ನಾವು ನೀಡಿದ್ದ ವಾಗ್ದಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರದ ನಡೆ ಪಾರದರ್ಶಕವಾಗಿರಲಿ ಎಂದು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆದು ಅಕ್ಕಿ ಖರೀದಿಸಿ ಮುಂದಿನ ದಿನಗಳಲ್ಲಿ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸುತ್ತೇವೆ. ಈ ಪ್ರಕ್ರಿಯೆಗೆ ಕೆಲ ಸಮಯ ಬೇಕಿರುವುದರಿಂದ ಜುಲೈ ಒಂದರಿಂದ ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿರುವ 5 ಕೆ.ಜಿ ಅಕ್ಕಿಯ ಬದಲಿಗೆ ತಲಾ 170 ರೂ. ನಂತೆ ಹಣ ನೀಡುತ್ತೇವೆ ಎಂದಿದ್ದಾರೆ.

Previous articleವಿದ್ಯುತ್ ಬಿಲ್ ಕಟ್ಟದ ನೇಕಾರರು: ಬನಹಟ್ಟಿ ಬಂದ್ ಯಶಸ್ವಿ
Next articleಐಫೋನ್ ಬಿಡಿಭಾಗಗಳ ಘಟಕ ಬೆಳಗಾವಿಯಲ್ಲಿ