ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಎಲ್ಲಾ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳ ಜೊತೆಗೂಡಿ ಜೂನ್ ೨೨ ರಂದು ವಿದ್ಯುತ್ ದರದಲ್ಲಿ ಬೆಲೆ ಏರಿಕೆ ವಿರೋಧಿಸಿ ಒಂದು ದಿನದ ಬಂದ್‌ಗೆ ಕರೆ ನೀಡಿದೆ.
ಹೆಸ್ಕಾಂನ ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ಎಲ್ಲಾ ವ್ಯಾಪಾರಸ್ಥರು, ಮತ್ತು ಕೈಗಾರಿಕೆಗಳು ತಮ್ಮ ವ್ಯವಹಾರವನ್ನು ಜೂನ್ ೨೨ ರಂದು ಬಂದ್ ಮಾಡಲು ವಿನಂತಿಸಿದ್ದಾರೆ.
ಕಳೆದ ೮ ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದಿಂದ ವ್ಯಾಪಾರಸ್ಥರು, ಸಾಮಾನ್ಯ ಜನತೆ ಹಾಗೂ ಕೈಗಾರಿಕೆಗಳ ಮೇಲೆ ಆಗುವ ಪರಿಣಾಮಗಳ ಕುರಿತು ಸರಕಾರಕ್ಕೆ ಗಂಭೀರತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಈ ಬಂದ್‌ಗೆ ಕರೆ ನೀಡುತ್ತಿದ್ದೇವೆ. ವಿದ್ಯುತ್ ಶುಲ್ಕದಲ್ಲಿ ಕಡಿತವನ್ನು ಮಾಡಿ ಪರಿಹಾರವನ್ನು ನೀಡಲು ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂದು ಭಾವಿಸುತ್ತೇವೆ.
ಈ ಬಂದ್ ಕರೆಯಲ್ಲಿ ಗದಗ, ಬಿಜಾಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟಿ, ಧಾರವಾಡ, ಶಿರಸಿ, ಕಾರವಾರ, ಬೀದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಂಗಳೂರು, ಯಾದಗಿರಿ, ಚಿತ್ರದುರ್ಗ, ಹಾವೇರಿ ಹಾಗೂ ಇತರ ಕೈಗಾರಿಕಾ ಉದ್ಯಮ ಸಂಘಗಳು ಪಾಲ್ಗೊಳ್ಳಲು ಒಪ್ಪಿಕೊಂಡಿವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ ಪ್ರಕಟಣೆ ತಿಳಿಸಿದೆ.