ಮಂಗಳೂರು: ಎಂಜಿನಿಯರಿಂಗ್ ಮುಗಿಸಿ ಕೈ ತುಂಬಾ ವೇತನವಿದ್ದ ಕೆಲಸ ತ್ಯಜಿಸಿ, ದೇಶದ ಭವಿಷ್ಯಕ್ಕಾಗಿ ಯುವ ಸಮೂಹದಲ್ಲಿ ರಾಷ್ಟ್ರೀಯತೆ, ದೇಶ ಭಕ್ತಿ ಉದ್ದೀಪನಗೊಳಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯ ವಿದ್ಯಾರ್ಹತೆಯನ್ನು ಪ್ರಥಮ ಪಿಯುಸಿ ಫೇಲ್ ಆದ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ವ್ಯಂಗ್ಯವಾಡಿದ್ದಾರೆ.
ಸೂಲಿಬೆಲೆ ಯಾವ ಪಿಎಚ್‌ಡಿ ಪದವಿಗಳಿಸಿದ್ದಾನೆ, ಬಾಡಿಗೆ ಭಾಷಣಗಾರರನ್ನು ಲೇಖಕರು ಮಾಡಿ, ಅವನ ಪಾಠ ಮಕ್ಕಳು ಯಾಕೆ ಓದಬೇಕು ಎಂದು ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಡಾ.ಭರತ್ ಶೆಟ್ಟಿ ವೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ನಿಮ್ಮ ವಿದ್ಯಾರ್ಹತೆ ನೋಡಿಕೊಂಡು ಸೂಲಿಬೆಲೆ ಬಗ್ಗೆ ಮಾತನಾಡಿ, ನಿಮಗೆ ಪ್ರಶ್ನಿಸುವ ನೈತಿಕ ಹಕ್ಕು ಇಲ್ಲ ಎಂದು ಖರ್ಗೆಗೆ ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ರಾಷ್ಟ್ರೀಯತೆಯನ್ನು, ದೇಶ ಪ್ರೇಮವನ್ನು ಜಾಗೃತಿ ಮಾಡುವುದೇ ಅಪರಾಧವೆಂದು ಪ್ರಿಯಾಂಕ ಖರ್ಗೆ ತಿಳಿದಂತಿದೆ. ದೇಶ ಭಕ್ತಿ, ನಮ್ಮ ರಾಷ್ಟ್ರ ಎಂಬ ಭಾವನೆಯನ್ನು ನಮ್ಮ ಭವಿಷ್ಯದ ಮಕ್ಕಳಿಗೆ ಯಾವತ್ತೂ ತಿಳಿಸುವ ಗೋಜಿಗೆ ಹೋಗದ ಕಾಂಗ್ರೆಸ್ ಪಕ್ಷವು, ದೇಶದೊಳಗೆ ಭಯೋತ್ಪಾದಕನಿಗೆ ಏನಾದಾರೂ ಆದರೆ ಕಣ್ಣೀರಿಡುವ ಪಕ್ಷವಾಗಿದೆ.
ರಾಷ್ಟ್ರೀಯತೆಯ ಭಾವನೆಯಿಲ್ಲದೆ ಸೊರಗಿರುವ ಮಕ್ಕಳು ಇಂದು ರೈಲು ಓಡಾಡುವ ಹಳಿಗಳ ಮೇಲೆ ಕಲ್ಲಿಟ್ಟು, ಕಲ್ಲು ತೂರಾಟ ನಡೆಸಿ ಹಿಂಸಾ ಪ್ರವೃತ್ತಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಪಟ ಜಾತ್ಯಾತೀತತೆಯ ಕಾರಣದಿಂದಾಗಿ ದೇಶ ಸೊರಗುತ್ತಿದೆಯ ಹೊರತು, ಸೂಲಿಬೆಲೆಯಂತಹ ದೇಶ ಭಕ್ತರಿಂದಲ್ಲ ಎಂದು ಕಿಡಿಕಾರಿದ್ದಾರೆ.
Home ತಾಜಾ ಸುದ್ದಿ ಪಿಯುಸಿ ಫೇಲ್ ಆದ ಪ್ರಿಯಾಂಕ್ ಎಂಜಿನಿಯರ್ ಸೂಲಿಬೆಲೆ ಪದವಿ ಕೇಳುತ್ತಿದ್ದಾರೆ: ಡಾ.ಭರತ್ ಶೆಟ್ಟಿ ವ್ಯಂಗ್ಯ