೧೯೮೭ ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಕೇವಲ ೯ ತಿಂಗಳುಗಳಿಗೆ ಪತನಗೊಂಡಿದ್ದು ವಿಪರ್ಯಾಸ. ಆ ಸನ್ನಿವೇಶಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಂದಿಗೂ “ಬೊಮ್ಮಾಯಿ ಪ್ರಕರಣ”ವೆಂದೇ ಪ್ರಚಲಿತವಾಗಿದೆ. ರಾಜಕೀಯ ಕ್ಷಿಪ್ರ ಕ್ರಾಂತಿಯಿಂದ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಸರ್ಕಾರಗಳು ಸಂದಿಗ್ದತೆಯಲ್ಲಿ ಸಿಕ್ಕಿಕೊಂಡಾಗಲೆಲ್ಲಾ ಬೊಮ್ಮಾಯಿಯವರ ಪ್ರಕರಣ ಈಗಲೂ ಮುನ್ನೆಲೆಗೆ ಬರುತ್ತದೆ.
೧೯೪೦-೨೦೧೦ ರ ಅವಧಿಯಲ್ಲಿ ರಾಜ್ಯ ಮತ್ತು ರಾಷ್ಟç ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯರುಗಳಲ್ಲಿ ದಿವಂಗತ ಎಸ್ .ಆರ್. ಬೊಮ್ಮಾಯಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ೨೦ನೇ ಶತಮಾನದ ಪ್ರಸಿದ್ಧ ತತ್ವಜ್ಞಾನಿ ಎಂ. ಎನ್ .ರಾಯ್ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಅವರ ಅನುಯಾಯಿಯಾಗಿದ್ದ ಬೊಮ್ಮಾಯಿಯವರು ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯದ ನಂತರ ಕರ್ನಾಟಕದ ಏಕೀಕರಣದಲ್ಲಿ ಸಕ್ರಿಯ ಪಾತ್ರ ವಹಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದ ಇವರು ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದಲ್ಲದೆ, ಭೂಸುಧಾರಣೆ ಕಾಯ್ದೆ ಬರುವ ಮುಂಚೆ ಬಡ ಗೇಣಿದಾರರ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು. ನಂತರ ಚುನಾವಣಾ ರಾಜಕಾರಣಕ್ಕೆ ಧುಮುಕಿದ ಬೊಮ್ಮಾಯಿಯವರು ೧೯೭೨ ರಿಂದಲೇ ಅವಿಭಜಿತ ಧಾರವಾಡ ಜಿಲ್ಲೆಯಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಾದರು.
೧೯೭೪ ರ ಸಮಯ. ನಾನು ಎಬಿವಿಪಿ ಸಕ್ರಿಯ ಕಾರ್ಯಕರ್ತ. ಆಗ ಚಾಮರಾಜನಗರ ಕ್ಷೇತ್ರದ ವಿಧಾನ ಸಭಾ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಆರಿಸಿಬಂದಿದ್ದ ಎಂ.ಸಿ.ಬಸಪ್ಪ ಅವರ ರೂಮ್ ಮೇಟ್ ಆಗಿದ್ದ ಬೊಮ್ಮಾಯಿಯವರ ಸಂಪರ್ಕ ನನಗಾಯಿತು. ೧೯೭೩-೭೪ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭ. ದೇಶವ್ಯಾಪಿ ಜೆ.ಪಿ.ಸಂಪೂರ್ಣ ಕ್ರಾಂತಿ ಜೋರಾಗಿತ್ತು. ಕರ್ನಾಟಕದಲ್ಲೂ ಅದರ ಕಿಚ್ಚು ಹೆಚ್ಚಾಗಿತ್ತು. ನಾನೂ ಸೇರಿದಂತೆ ಅನೇಕ ಯುವಕರು ನಾಯಕರಾಗಿ ಹೊರಹೊಮ್ಮಿದ ಕಾಲವದು. ಆಗ ಬೊಮ್ಮಾಯಿಯವರು ಜಯಪ್ರಕಾಶ್ ನಾರಾಯಣ್ ರೊಂದಿಗೆ ಉತ್ತರ ಕರ್ನಾಟಕದಲ್ಲಿ ಸಂಚರಿಸುವ ಮೂಲಕ ಹೋರಾಟದ ಮುಂಚೂಣಿಯಲ್ಲಿದ್ದರು. ನಾನು ಸಹ ಜೆಪಿ ಯವರೊಂದಿಗೆ ಸಂಚರಿಸುತ್ತಿದ್ದಾಗ ಬೊಮ್ಮಾಯಿಯವರ ಭೇಟಿ ನಿರಂತರವಾಗಿ ಆಗುತ್ತಿತ್ತು. ನಾನು ಅವರಿಗೆ ಮತ್ತಷ್ಟು ಹತ್ತಿರವಾಗಿಹೋದೆ.
೧೯೭೮ ರಿಂದ ರಾಜ್ಯ ರಾಜಕಾರಣದಲ್ಲಿ ಆದ ಪ್ರತಿಯೊಂದು ಕ್ಷಿಪ್ರ ಬದಲಾವಣೆಗಳಲ್ಲಿ ಬೊಮ್ಮಾಯಿ ಅವರು ಸಾಕ್ಷಿಯಾಗಿದ್ದಾರೆ. ತುರ್ತು ಪರಿಸ್ಥಿತಿ ಹಿಂತೆಗೆತದ ನಂತರ, ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಒಂದಾಗಿ ರಚಿಸಿಕೊಂಡಿದ್ದ ಜನತಾ ಪರಿವಾರ ೧೯೮೦ ರಲ್ಲಿ ಒಡೆದ ಮನೆಯಂತಾಯಿತು. ಆಗ ಬೊಮ್ಮಾಯಿಯವರು ಜನತಾ ಪಕ್ಷದ ಅಧ್ಯಕ್ಷರಾಗಿದ್ದರು. ೧೯೭೮ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾದ್ದರಿಂದ ವಿಚಲಿತರಾದಂತಿದ್ದ ರಾಮಕೃಷ್ಣ ಹೆಗಡೆಯವರು ರಾಷ್ಟ್ರ ರಾಜಕಾರಣದತ್ತ ತಮ್ಮ ಗಮನ ಹರಿಸಿದರು. ಅಂತಹ ಪರಿಸ್ಥಿತಿಯಲ್ಲಿ ಧೈರ್ಯಗುಂದದ ಬೊಮ್ಮಾಯಿಯವರು ಪ್ರೊ. ಲಕ್ಷ್ಮೀಸಾಗರ್, ಎಂ.ಚಂದ್ರಶೇಖರ್, ವಿ.ಎಸ್.ಕೃಷ್ಣಯ್ಯರ್ ಮುಂತಾದ ನಾಯಕರ ಸಹಕಾರದಿಂದ ಪಕ್ಷವನ್ನು ಕಟ್ಟಿ ಬೆಳೆಸಿದರು. ೧೯೮೩ ರಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಬೊಮ್ಮಾಯಿರವರು ನನ್ನಂಥ ಅನೇಕರನ್ನು ಗುರುತಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಪ್ರೇರೇಪಿಸಿದರು. ಆಗ ನಾನು ಜೀವನೋಪಾಯಕ್ಕಾಗಿ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಕರೆದು, “ನಿನ್ನ ಹುಟ್ಟೂರು ಮರಳವಾಡಿ ಕನಕಪುರದಲ್ಲಿದೆ. ಕನಕಪುರದಿಂದಲೇ ಸ್ಪರ್ಧಿಸು ಎಂದು ಹೇಳಿ ಬಿ.ಫಾರ್ಮ್ ಕೊಡುವುದರ ಜೊತೆಗೆ ತಾವು ಧರಿಸುತ್ತಿದ್ದ ಜುಬ್ಬದ ಜೇಬಿನಿಂದ ೫ ಸಾವಿರ ಹಣ ಕೊಟ್ಟು, ಕಳುಹಿಸಿದರು. ಅಳುಕಿನಿಂದಲೇ ಸ್ಪರ್ಧಿಸಿ, ಗೆದ್ದು ಬಂದೆ. ಅಂದು ಪ್ರಾರಂಭವಾದ ನನ್ನ ಸಾರ್ವಜನಿಕ ಬದುಕು ೬ ಬಾರಿ ಶಾಸಕನಾಗಿ, ಅದರಲ್ಲಿ ೧೮ ವರ್ಷಗಳ ಕಾಲ ಮಂತ್ರಿಯಾಗಿ ಕೆಲಸ ಮಾಡುವವರೆಗೆ ಬಂದು ನಿಂತಿತು. ಈಗಲೂ ನಾನು ರಾಜಕಾರಣದಲ್ಲಿ ಸಕ್ರಿಯನಾಗಿರುವಂತೆ ಉತ್ತೇಜನ ನೀಡಿತು. ಇದಕ್ಕೆ ಬೊಮ್ಮಾಯಿಯವರೇ ಮೂಲ ಕಾರಣ. ರೈತರು, ಕಾರ್ಮಿಕರು, ಕಲಾವಿದರು, ಕನ್ನಡಪರ ಹೋರಾಟಗಾರರನ್ನು ಒಗ್ಗೂಡಿಸಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದರ ರಚನೆಯಾಗಲು ಪ್ರಮುಖ ಪಾತ್ರ ವಹಿಸಿದವರಲ್ಲಿ ಬೊಮ್ಮಾಯಿಯವರೂ ಪ್ರಮುಖರು. ನಂತರ ನಡೆದದ್ದೆಲ್ಲ ಇತಿಹಾಸದಲ್ಲಿ ಉಳಿದಿದೆ.
ಮೊಟ್ಟಮೊದಲ ಬಾರಿಗೆ ರಚನೆಯಾದ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಮುಂಚೂಣಿ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್ ಮತ್ತು ದೇವೇಗೌಡ ಅವರು ಪ್ರತಿದಿನ ಭೇಟಿ ಮಾಡಿ, ಸರ್ಕಾರದ ಮತ್ತು ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚಿಸಿ, ಒಮ್ಮತದ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ನನ್ನನ್ನೂ ಸೇರಿದಂತೆ, ಡಾ. ಜೀವರಾಜ್ ಆಳ್ವ, ಬಿ.ಎ. ಜೀವಿಜಯ, ಸಿದ್ದರಾಮಯ್ಯ, ರಮೇಶ್ ಜಿಗಜಿಣಗಿ, ಎಂ.ಪಿ.ಪ್ರಕಾಶ್, ನಜೀರ್ ಸಾಬ್ ಹೀಗೆ ಪ್ರತಿಯೊಂದು ವರ್ಗ ಮತ್ತು ಪ್ರದೇಶವಾರು ನಾಯಕರನ್ನು ಗುರುತಿಸಿ, ೨ನೇ ಹಂತದ ನಾಯಕರುಗಳನ್ನಾಗಿ ನಮ್ಮನ್ನೆಲ್ಲ ಬೆಳೆಸಿದರು. ಆ ನಾಲ್ಕು ಜನ ತೆಗೆದುಕೊಳ್ಳುತ್ತಿದ್ದ ಎಲ್ಲ ತೀರ್ಮಾನಗಳನ್ನು, ನಮ್ಮೊಂದಿಗೆ ಚರ್ಚಿಸುತ್ತಿದ್ದರು.
ಹಿಂದುಳಿದ ವರ್ಗ ಮತ್ತು ದಲಿತ ನಾಯಕರಿಗೆ ವಿಶೇಷ ಆದ್ಯತೆ ನೀಡುತ್ತಿದ್ದರು. ಅದರಿಂದಾಗಿಯೇ ಪ್ರೊ. ಲಕ್ಷ್ಮೀಸಾಗರ್, ಸಿದ್ದರಾಮಯ್ಯ ರಂಥ ನಾಯಕರು ಹೊರಹೊಮ್ಮಲು ಸಾಧ್ಯವಾಯಿತು. ಇದೆಲ್ಲದರ ಹಿನ್ನೆಲೆಯಲ್ಲಿ ಬೊಮ್ಮಾಯಿಯವರು ಇಂದಿಗೂ ಪ್ರಸ್ತುತವೆನಿಸಿದ್ದಾರೆ.
ಅವರು ಪಕ್ಷದ ರಾಷ್ಟ್ರ ಮತ್ತು ರಾಜ್ಯದ ಅಧ್ಯಕ್ಷರಾಗಿದ್ದ ಎಲ್ಲ ಸಂದರ್ಭಗಳಲ್ಲೂ ಬದ್ಧತೆ ಮೆರೆದವರು. ಕೆಲವು ವಿಚಾರಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋದವರು. ಅವೆಲ್ಲವೂ ಸದುದ್ದೇಶದಿಂದ ೧೯೮೮ ರಲ್ಲಿ ಹರಿದುಹಂಚಿಹೋಗಿದ್ದ ಜನತಾ ಪರಿವಾರಗಳನ್ನು ವಿ.ಪಿ.ಸಿಂಗ್ ರವರ ನೇತೃತ್ವದಲ್ಲಿ ಒಗ್ಗೊಡಿಸಿ ಜನತಾ ದಳ ಪಕ್ಷದ ಸ್ಥಾಪನೆಗೆ ಕರಣರಾಗುವ ಮೂಲಕ ರಾಷ್ಟ್ರ ರಾಜಕಾರಣದಲ್ಲೂ ಪರ್ಯಾಯ ಶಕ್ತಿಯೊಂದರ ಹುಟ್ಟಿಗೆ ಕಾರಣರಾದರು. ೧೯೯೦ ರಿಂದ ೧೯೯೬ ರವರೆಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಪಕ್ಷವನ್ನು ಕಟ್ಟಲು ಮಾಡಿದ ಪ್ರಯತ್ನ ಅವಿಸ್ಮರಣೀಯ. ಬದಲಾದ ರಾಜಕೀಯ ಬೆಳವಣಿಗೆಗೆಳಲ್ಲಿ ೧೯೯೯ ರಲ್ಲಿ ಜನತಾ ದಳದ ವಿಭಜನೆಯ ನಂತರ ಜೆಡಿಯು ಬಣವನ್ನು ಬೆಂಬಲಿಸಿದರು. ದೊಡ್ಡ ಪ್ರಮಾಣದ ಪಕ್ಷಾಂತರಗಳು, ಪಕ್ಷ ಒಡೆದು ಅನೇಕ ಹೋಳುಗಳಾಗಿದ್ದು, ಜೀವನದ ಅಂತಿಮ ದಿನಗಳಲ್ಲಿ ಸಹಜವಾಗಿಯೇ ಅವರಲ್ಲಿ ಬೇಸರ ತಂದಿತ್ತು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಂತ್ರಿಯಾಗಿ ಅವರು ಕೈಗೊಂಡ ಹಲವಾರು ಯೋಜನೆಗಳು ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ. ೧೯೮೩ರಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದಾಗ ಸ್ಥಾಪಿಸಿದ ಕೈಗಾರಿಕಾ ಪ್ರದೇಶಗಳು, ಹಣಕಾಸು ಸಚಿವರಾಗಿದ್ದಾಗ, ಬಡ ಕುಟುಂಬಗಳಿಗೆ ಎರಡು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವ ಯೋಜನೆ, ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿ ರಾಜ್ಯಕ್ಕೆ ನೀಡಿರುವ ಭರಪೂರ ಯೋಜನೆಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿವೆ.
೧೯೮೭ ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಕೇವಲ ೯ ತಿಂಗಳುಗಳಿಗೆ ಪತನಗೊಂಡಿದ್ದು ವಿಪರ್ಯಾಸ. ಆ ಸನ್ನಿವೇಶಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಂದಿಗೂ “ಬೊಮ್ಮಾಯಿ ಪ್ರಕರಣ”ವೆಂದೇ ಪ್ರಚಲಿತವಾಗಿದೆ. ರಾಜಕೀಯ ಕ್ಷಿಪ್ರ ಕ್ರಾಂತಿಯಿಂದ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಸರ್ಕಾರಗಳು ಸಂದಿಗ್ದತೆಯಲ್ಲಿ ಸಿಕ್ಕಿಕೊಂಡಾಗಲೆಲ್ಲಾ ಬೊಮ್ಮಾಯಿಯವರ ಪ್ರಕರಣ ಈಗಲೂ ಮುನ್ನೆಲೆಗೆ ಬರುತ್ತದೆ.
ಬೊಮ್ಮಾಯಿಯವರ ರಾಜಕೀಯ ಜೀವನದ ಏಳು ಬೀಳುಗಳಲ್ಲಿ ಅನೇಕರು ಕಾರಣರಾಗಿದ್ದಾರೆ. ಅವರ ಧರ್ಮಪತ್ನಿ ಶ್ರೀಮತಿ ಗಂಗಮ್ಮ ಅವರ ತ್ಯಾಗ ಮತ್ತು ಸಹಕಾರ ಇತ್ತು. ಅಕ್ಕಾಮಹಾದೇವಿ ಮತ್ತು ಬಸವಣ್ಣನವರ ವಚನಗಳಿಗೆ ಮಾರುಹೋಗಿದ್ದ ಅವರು ಅವುಗಳನ್ನು ಪಾಲಿಸುತ್ತಿದ್ದರು. ಸಾಹೇಬರನ್ನು ನೋಡಲು ಮನೆಗೆ ಹೋದವರಿಗೆಲ್ಲ ಉಪಚರಿಸಿ ಮಾತೃತ್ವವನ್ನು ಮೆರೆಯುತ್ತಿದ್ದರು. ಮಂತ್ರಿಗಳಾಗಿ ಬೊಮ್ಮಾಯಿ ಅವರ ದಿಟ್ಟ ಆಡಳಿತಕ್ಕೆ ಅವರೊಂದಿಗೆ ಕೆಲಸ ಮಾಡಿದ ಪ್ರಾಮಾಣಿಕ ಐಎಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಅವರ ದಕ್ಷತೆ, ಅವರ ಕಾರಿನ ಚಾಲಕ ಮಲ್ಲಪ್ಪ ಅವರ ನಿಷ್ಕಳಂಕ ಸೇವೆ, ಅವರ ಮಕ್ಕಳು, ಅದರಲ್ಲೂ ಬಸವರಾಜ್ ಮತ್ತು ಮಹೇಶ್ ಅವರಲ್ಲಿರುವ ಗೌರವ ಮತ್ತು ವಿನಮ್ರತೆ ಇವುಗಳೆಲ್ಲವೂ ಕಾರಣವೆಂಬುದು ನನ್ನ ಭಾವನೆ. ಒಟ್ಟಿನಲ್ಲಿ ಅವರೊಬ್ಬ ಅಜಾತಶತ್ರು ಮತ್ತು ಸೂಕ್ಷ್ಮಗ್ರಾಹಿಯಾಗಿದ್ದರು. ಜೂನ್ ೬ ಬೊಮ್ಮಾಯಿಯವರ ೯೯ನೇ ಜನ್ಮ ದಿನಾಚರಣೆ. ಅಂದು ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತಿರುವುದು ಅತ್ಯಂತ ಸಮಂಜಸವಾಗಿದೆ. ಇದರ ರೂವಾರಿಗಳಾಗಿರುವ ಬೊಮ್ಮಾಯಿ ರವರ ಹೆಮ್ಮೆಯ ಪುತ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಅಭಿನಂದನೆಗಳು. ದೇಶದ ರಾಜಕಾರಣ ಕಲುಷಿತಗೊಳ್ಳುವ ಆತಂಕವಿರುವ ಈ ಕಾಲಘಟ್ಟದಲ್ಲಿ ಎಸ್.ಆರ್. ಬೊಮ್ಮಾಯಿ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಕ್ರಮಗಳೆಲ್ಲವೂ ಉತ್ತಮ ವ್ಯವಸ್ಥೆಗೆ ಪೂರಕವಾಗಲೆಂದು ಆಶಿಸುತ್ತೇನೆ.
ಪಿ.ಜಿ.ಆರ್. ಸಿಂಧ್ಯ, ಮಾಜಿ ಸಚಿವರು