ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ

0
14

ಹೈದರಾಬಾದ್: ೨೦೨೩ರ ಐಪಿಎಲ್ ಲೀಗ್‌ನ ೬೫ನೇ ಪಂದ್ಯ ಗುರುವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೇಂರ‍್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ.
ಆರ್‌ಸಿಬಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಅಕ್ಷರಶಃ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆರ್‌ಸಿಬಿ ಈಗಾಗಲೇ ೧೨ ಪಂದ್ಯಗಳನ್ನಾಡಿದ್ದು, ಇನ್ನು ಕೊನೆಯ ಎರಡು ಪಂದ್ಯಗಳು ಮಾತ್ರ ಇರುವ ಕಾರಣ ಈ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ರೇಸ್‌ನಲ್ಲಿ ಮೇಲುಗೈ ಸಾಧಿಸುವ ಅನಿವಾರ್ಯತೆಯಲ್ಲಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಟೂರ್ನಿಯಲ್ಲಿ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಹಂತದಲ್ಲಿ ಎಸ್‌ಆರ್‌ಹೆಚ್ ಸೋಲಲಿ- ಗೆಲ್ಲಲಿ ಕಳೆದುಕೊಳ್ಳುವಂತದ್ದೇನಿಲ್ಲ. ಹೀಗಾಗಿ ಯಾವುದೇ ಒತ್ತಡವಿಲ್ಲದೆ ಎಸ್‌ಆರ್‌ಹೆಚ್ ತಂಡ ಆಡಲಿದ್ದು, ಆರ್‌ಸಿಬಿ ತಂಡಕ್ಕೆ ತನ್ನ ಮೇಲಿರುವ ಒತ್ತಡವೇ ಅಪಾಯವಾಗುವ ಸಾಧ್ಯತೆಯಿದೆ.
ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ ಒಟ್ಟು ೨೨ ಬಾರಿ ಮುಖಾಮುಖಿಯಾಗಿದೆ. ಈ ಪೈಕಿ ಎಸ್‌ಆರ್‌ಹೆಚ್ ೧೨ ಬಾರಿ ಗೆದ್ದಿದ್ದರೆ ಆರ್‌ಸಿಬಿ ಗೆದ್ದಿರುವುದು ೯ ಬಾರಿ ಮಾತ್ರ. ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಕ್ತಾಯವಾಗಿದೆ.
ಕಳೆದ ಆವೃತ್ತಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದ್ದವು. ಹೈದರಾಬಾದ್‌ನ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ಈವರೆಗೆ ಒಟ್ಟು ೧೦ ಪಂದ್ಯಗಳನ್ನು ಆಡಿದೆ. ಈ ಹಿಂದೆ ಇದ್ದ ತಂಡ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಇಲ್ಲಿ ೩ ಪಂದ್ಯಗಳನ್ನು ಆಡಿದ್ದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ೭ ಪಂದ್ಯಗಳನ್ನು ಆಡಿದೆ. ಆದರೆ ಈ ತಾಣದಲ್ಲಿ ಆರ್‌ಸಿಬಿ ಒಟ್ಟು ಗೆದ್ದಿರುವುದು ಕೇವಲ ೨ ಪಂದ್ಯಗಳಲ್ಲಿ ಮಾತ್ರ. ೨೦೧೫ರಲ್ಲಿ ಕೊನೆಯ ಬಾರಿಗೆ ಆರ್‌ಸಿಬಿ ಈ ಮೈದಾನದಲ್ಲಿ ಗೆಲುವು ಸಾಧಿಸಿತ್ತು.
ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಫಾಫ್ ಡುಪ್ಲೆಸಿಸ್ ಅಮೋಘ ಸಾಧನೆ ಮಾಡಿದ್ದಾರೆ. ಅವರು ಟೂರ್ನಿಯಲ್ಲಿ ಈವರೆಗೆ ೧೨ ಪಂದ್ಯಗಳಿಂದ ೫೭.೩೬ರ ಸರಾಸರಿಯಲ್ಲಿ ೬೩೧ ರನ್‌ಗಳಿಸಿದ್ದು, ೮೪ ಗರಿಷ್ಠ ಸ್ಕೋರ್ ಆಗಿದೆ. ಡುಪ್ಲೆಸಿಸ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರಾಗಿದ್ದಾರೆ.
ಹಾಗೆಯೇ, ವಿರಾಟ್ ಕೊಹ್ಲಿ ಆರ್‌ಸಿಬಿ ಪರವಾಗಿ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ. ೧೨ ಪಂದ್ಯಗಳನ್ನಾಡಿರುವ ಕೊಹ್ಲಿ ಬ್ಯಾಟ್‌ನಿಂದ ೪೩೮ ರನ್ ಹರಿದುಬಂದಿದೆ. ಅಜೇಯ ೮೨ ಗರಿಷ್ಠ ಸ್ಕೋರ್ ಆಗಿದೆ. ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಅದ್ಭುತ ಫಾರ್ಮ್ನಲ್ಲಿದ್ದು, ೧೨ ಪಂದ್ಯಗಳಿಂದ ೩೮೪ ರನ್ ಗಳಿಸಿದ್ದಾರೆ.
ಸನ್‌ರೈಸರ್ಸ್ ಪರ ಹೆನ್ರಿಚ್ ಕ್ಲಾಸೆನ್ ಅತಿ ಹೆಚ್ಚು ರನ್‌ಗಳಿಸಿದ್ದು, ೧೦ ಪಂದ್ಯಗಳಿಂದ ೩೨೬ ರನ್ ಗಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ೧೨ ಪಂದ್ಯಗಳಲ್ಲಿ ೧೬ ವಿಕೆಟ್ ಪಡೆದಿದ್ದಾರೆ. ಹರ್ಷಲ್ ಪಟೇಲ್ ೧೨ ಪಂದ್ಯಗಳಲ್ಲಿ ೧೨ ವಿಕೆಟ್ ಪಡೆದಿದ್ದಾರೆ. ಎಸ್‌ಆರ್‌ಎಚ್ ಪರ ಭುವನೇಶ್ವರ್ ಕುಮಾರ್ ೧೨ ಪಂದ್ಯಗಳಲ್ಲಿ ೧೪ ವಿಕೆಟ್ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ಭುವಿ ಐದು ವಿಕೆಟ್ ಸಾಧನೆ ಮಾಡಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಪಿಚ್ ರಿಪೋರ್ಟ್
ರಾಜೀವ್ ಗಾಂಧಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಸಮತೋಲಿತ ಹೋರಾಟಕ್ಕೆ ವೇದಿಕೆಯಾಗಲಿದೆ. ಈ ಮೈದಾನ ವೇಗದ ಬೌಲರ್‌ಗಳಿಗೆ ಉತ್ತಮವಾಗಿ ನೆರವು ನೀಡಲಿದ್ದು, ನಂತರದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಹಾಗಿದ್ದರೂ ಬ್ಯಾಟರ್‌ಗಳು ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸುವ ಅವಕಾಶವೂ ಇದೆ.

Previous articleಎಚ್‌ ಡಿ ದೇವೇಗೌಡರ 91ನೇ ಜನ್ಮದಿನಕ್ಕೆ ಶುಭ ಕೋರಿದ ಗಣ್ಯರು
Next articleಆರ್‌ಸಿಬಿಗೆ ಸರಳ ಹಾದಿ ಮಾಡಿದ ಸೂಪರ್‌ಜೈಂಟ್ಸ್