ಪ್ರವೀಣ್ ಕುಟುಂಬಕ್ಕೆ ನ್ಯಾಯ ಸಿಗುವ ತನಕ ವಿರಮಿಸುವುದಿಲ್ಲ

0
18

ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವಮೋರ್ಚಾ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರವಿವಾರ ಸಂಜೆ ಭೇಟಿ ನೀಡಿದರು.
ಮನೆಗೆ ಆಗಮಿಸಿದ ಜೆ.ಪಿ.ನಡ್ಡಾ ಅವರನ್ನು ಮನೆಯವರು ಸ್ವಾಗತಿಸಿದರು.ಬಳಿಕ ಜೆ.ಪಿ. ನಡ್ಡಾ ಅವರು ಪ್ರವೀಣ್ ನೆಟ್ಟಾರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಬಿಜೆಪಿ ವತಿಯಿಂದ ನಿರ್ಮಿಸಿ ಕೊಡಲಾದ ನೂತನ ಮನೆಯನ್ನು ವೀಕ್ಷಿಸಿದರು. ಮನೆಯವರ ಜೊತೆ ಮಾತುಕತೆ ನಡೆಸಿದರು. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜೆ.ಪಿ.ನಡ್ಡಾ ಅವರಿಗೆ ಮನೆಯವರನ್ನು ಪರಿಚಯಿಸಿ ಮಾಹಿತಿ ನೀಡಿದರು. ಪ್ರವೀಣ್ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಸೇರಿದಂತೆ ಮನೆಯವರು, ಬಿಜಪಿ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯಾಯ ಸಿಗುವ ತನಕ ವಿರಮಿಸುವುದಿಲ್ಲ:
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರವೀಣ್‌ ಕುಟುಂಬಕ್ಕೆ ನ್ಯಾಯ ಸಿಗೋವರೆಗೂ ಹೋರಾಟ ಮುಂದುವರಿಯಲಿದೆ. ಅವರ ಕುಟುಂಬ ಸದಸ್ಯರ ಜೊತೆ ನಮ್ಮ ಸರ್ಕಾರ, ಪಕ್ಷ ಸದಾ ಇರಲಿದೆ. ನಾನು ಪ್ರವೀಣ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ‌ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ ಎಂದು ಹೇಳಿದರು. ಘಟನೆಯ ಬಗ್ಗೆ ಎನ್‌ಐಎ ತನಿಖೆ ನಡೆಯುತ್ತಿದ್ದು ಘಟನೆಗೆ ಕಾರಣರಾದವರನ್ನು ಬಂಧಿಸಿ, ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನ್ಯಾಯ ಸಿಗೋವರೆಗೂ ವಿರಮಿಸುವುದಿಲ್ಲ.ಇಂಥಹ ಮಾನಸೀಕತೆ ವಿರುದ್ದ ನಮ್ಮ ಹೋರಾಟ ನಿರ್ಣಾಯಕ ಘಟ್ಟದವರೆಗೂ ಮುಂದುವರೆಯಲಿದೆ. ಪ್ರವೀಣ್ ಅವರ ಕುಟುಂಬಕ್ಕೆ ಸರ್ಕಾರ ಹಾಗು ಪಕ್ಷ ಎಲ್ಲವನ್ನೂ ನೀಡಿದೆ. ಮುಂದೆಯೂ ಅವರ ಜೊತೆಗೆ ಇದ್ದೇವೆ ಎಂದು ಹೇಳಿದರು. ಜೆ.ಪಿ.ನಡ್ಡಾ ಅವರು ಹೆಲಿಕಾಪ್ಟರ್ ಮೂಲಕ ಸುಳ್ಯಕ್ಕೆ ಆಗಮಿಸಿ, ರಸ್ತೆ ಮಾರ್ಗದ ಮೂಲಕ ಕಾರಲ್ಲಿ ಬೆಳ್ಳಾರೆಯ ನೆಟ್ಟಾರಿಗೆ ಆಗಮಿಸಿದರು. ಪೊಲೀಸ್ ಇಲಾಖೆ, ಅರೆಸೇನಾ ಪಡೆ ವತಿಯಿಂದ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

Previous articleಬೈಕ್-ಕಾರು ಅಪಘಾತ: ಪತಿ, ಪತ್ನಿ ಸಾವು
Next articleಮೂವರು ನೀರಿನಲ್ಲಿ ನಿಗೂಢ ನಾಪತ್ತೆ