ಬಳ್ಳಾರಿ: ಪ್ರಧಾನಿ ಮೋದಿ ಅವರು ಇಂದು ಹಮ್ಮಿಕೊಂಡ ವರ್ಚುವಲ್ ಸಭಾ ಕಾರ್ಯಕ್ರಮದ ವೆಚ್ಚವನ್ನು ರಾಜ್ಯ ಬಿಜೆಪಿಯ 219 ಅಭ್ಯರ್ಥಿಗಳ ಮೇಲೆ ಹಾಕಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆ ನಡೆಸಿದ್ದಾರೆ. ಸಭೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಒಟ್ಟು 50 ಲಕ್ಷ ಜನರನ್ನು ಸೇರಿಸಿ ಸಭೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸಹ ಸೇರಿದ್ದಾರೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಒಬ್ಬ ವ್ಯಕ್ತಿಯ ಮೇಲೆ 100 ರೂಪಾಯಿ ಖರ್ಚು ಹಾಕಿದರೂ ಕೋಟಿಗಟ್ಟಲೆ ಹಣ ಚುನಾವಣಾ ವೆಚ್ಚದ ಭಾಗ ಆಗಲಿದೆ. ಜೊತೆಗೆ ನನಗೆ ಇರುವ ಮಾಹಿತಿ ಅಂತೆ ಇದಕ್ಕೆ ಚುನಾವಣಾ ಆಯೋಗದಿಂದ ಅನುಮತಿ ಸಹ ಪಡೆದುಕೊಂಡಿಲ್ಲ. ನಾನು ಖುದ್ದು ಚುನಾವಣಾ ಆಯೋಗದ ರಾಜ್ಯ ಆಯುಕ್ತರನ್ನು ಈ ಕುರಿತು ಕೇಳಿದಾಗ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಜೊತೆಗೆ ಒಂದು ದೂರು ನೀಡಲು ಕೋರಿದ್ದಾರೆ. ನಾವು ದೂರು ಕೊಡುವುದಿಲ್ಲ. ಬದಲಿಗೆ ಆಯೋಗವೇ ಖುದ್ದು ದೂರು ದಾಖಲಿಸಿಕೊಂಡು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.