ಪ್ರೇಕ್ಷಕರಿಲ್ಲದ ನಾಟಕ ಕಂಪನಿ ಕಾಂಗ್ರೆಸ್

0
12

ಹುಬ್ಬಳ್ಳಿ: ಇಂದು ಜಾತ್ರೆ ಮಾಡುವವರ ಹಾಗೂ ಅಭಿವೃದ್ಧಿ ಮಾಡುವವರ ನಡುವೆ ಚುನಾವಣೆ ನಡೆಯುತ್ತಿದೆ. ನಮ್ಮದು ಆಮೀಷ ಒಡ್ಡುವ ಪಕ್ಷವಲ್ಲ ಅಭಿವೃದ್ಧಿ ಮಾಡುವ ಪಕ್ಷವಾಗಿದೆ. ಪ್ರೇಕ್ಷಕರಿಲ್ಲದ ನಾಟಕ ಕಂಪನಿ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಮರಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರ ಪ್ರಚಾರ ಸಭೆಯ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯಕ್ಕೆ ಇರುವ ಅನಿಷ್ಠ. ಅವರು ಇರುವುದೇ ನಮ್ಮ ದೌರ್ಭಾಗ್ಯ. ಮತ್ತೊಮ್ಮೆ ಆ ದೌರ್ಭಾಗ್ಯ ಬರಬಾರದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ದೀನ ದಲಿತರನ್ನು ಕಾಂಗ್ರೆಸ್ ಕಡೆಗಣಿಸಿದೆ. ಅಲ್ಲಿನ ಜನ ಇದೀಗ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್‌ನವರು ದೀನ ದಲಿತರನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ಮಾಡಿದ್ದರು. ಈ ಬಾರಿ ಅಂತಹ ಕಾಂಗ್ರೆಸ್‌ನ್ನು ಬಾವಿಯಲ್ಲಿ ಹಾಕಬೇಕು. ದೀನ ದಲಿತರ ಮತ ಬ್ಯಾಂಕ್ ಬಿಜೆಪಿಗೆ ಬಂದಿದೆ. ಇದರಿಂದಾಗಿ ಕಾಂಗ್ರೆಸಿಗರು ಹತಾಶರಾಗಿದ್ದಾರೆ. ಸ್ವಲ್ಪ ದಿನಗಳಲ್ಲಿ ಕಾಂಗ್ರೆಸ್ ದಿವಾಳಿಯಾಗಿ ಮನೆಗೆ ಹೋಗಲಿದೆ. ಐವತ್ತು ಸಾವಿರ ಮತಗಳ ಅಂತರದಿಂದ ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದ ಆಯ್ಕೆಯಾಗಿ ಬರುತ್ತಾರೆ ಎಂದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಬಸವಣ್ಣನವರ ಮೇಲೆ ರಾಹುಲ್ ಗಾಂಧಿಗೆ ಪ್ರೀತಿ ಬಂದಿದೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಬರಲಿಲ್ಲ. ಅಧಿಕಾರದಲ್ಲಿದ್ದಾಗೂ ರೈತರಿಗೆ ಏನು ಪರಿಹಾರ ನೀಡಲಿಲ್ಲ. ಈಗ ಕೂಡಲ ಸಂಗಮಕ್ಕೆ ಹೋಗಿ ವಿಭೂತಿ ಹಚ್ಚಿಕೊಳ್ಳುತ್ತಿದ್ದಾರೆ ಎಂದರು.
ಅಮರಗೋಳದಲ್ಲಿ ನಮ್ಮ ತಂದೆ ತಾಯಿ ಸಮಾಧಿ ಸ್ಥಳವಿದೆ. ಅಮರಗೋಳ ಗ್ರಾಮ ನನ್ನ ಗ್ರಾಮ. ಈ ಊರಿನ ಹಿರಿಯರೊಂದಿಗೆ ನಮ್ಮ ಬಾಂಧ್ಯವ್ಯ ಉತ್ತಮವಾಗಿದೆ. ಎಲ್ಲ ವರ್ಗ, ಸಮುದಾಯ ಒಟ್ಟಾಗಿ ಬೆಲ್ಲದ ಅವರಿಗೆ ಹೆಚ್ಚಿನ ಮತ ನೀಡಬೇಕು. ಉತ್ತಮ ಜನ ಸೇವಕನನ್ನು ಆಯ್ಕೆ ಮಾಡುವ ಅವಕಾಶ ನಿಮಗಿದೆ ಎಂದರು.

Previous articleಜನರಿಗೆ ಬಿಜೆಪಿಯ ಬಗ್ಗೆ ವಿಶ್ವಾಸ ಮೂಡಿದೆ: ಕೇಂದ್ರ ಸಚಿವ ಸೋನಾವಾಲ್
Next articleರಾಜ್ಯ ಸಂಪೂರ್ಣ ಬಿಜೆಪಿಮಯ ಆಗುವುದರಲ್ಲಿ ಸಂಶಯವಿಲ್ಲ