ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಹತ್ತಿರವಿರುವ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ರಮೇಶ ಕದಂ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಮೈದಾನದ ಹತ್ತಿರ ಸಮಾವೇಶಗೊಂಡು ಕಾರ್ಯಕರ್ತರು ಬೇಕೆ ಬೇಕು ನ್ಯಾಯ ಬೇಕು, ಜೈ ಶ್ರೀರಾಮ ಜೈ ಜೈ ಶ್ರೀರಾಮ ಎಂಬ ಘೋಷಣೆ ಕೂಗಿ ಟಮಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವ ಹಿಂದೂ ಪರಿಷತ್ ಮಹಾನಗರ ಕಾರ್ಯಾದರ್ಶಿ ರಮೇಶ ಕದಂ ಮಾತನಾಡಿ, ಈ ಹಿಂದೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲಾಗಿತ್ತು. ಅದೇ ರೀತಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಹಬ್ಬ ಆಚರಣೆಗೆ ಅನುಮತಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಮನವಿ ಸಲ್ಲಿಸಿದರೂ ಅನುಮತಿ ನೀಡಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಪಾಲಿಕೆ ಆಯುಕ್ತರು ತಮ್ಮ ಫೋನ್ ಸ್ವಿಚ್ಛ ಆಫ್ ಮಾಡಿಕೊಂಡಿದ್ದಾರೆ. ಅವರಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಆದರಿಂದ ಮಹಾಮಂಡಳ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಮಾ. ೯ ರಂದು ಬೆಳಿಗ್ಗೆ ೧೧ ರೊಳಗಾಗಿ ಕಾಮಣ್ಣ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಬೇಕು ಎಂದರು.
ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದಿದ್ದಲ್ಲಿ ಮೈದಾನದ ಗೇಟ್ ಮುಂದೆ ಕಾಮಣ್ಣ ಮೂರ್ತಿ ಸ್ಥಾಪಿಸಿ ಹಬ್ಬ ಆಚರಿಸುತ್ತೇವೆ ಎಂದು ಎಚ್ಚರಿಸಿದರು. ವಿಜಯ ಕ್ಷೀರಸಾಗರ, ವಿವೇಕ ಮುಕಾಶಿ, ರಾಘು ಎಲ್ಲಕ್ಕನವರ, ಶರಣಯ್ಯ ಹಿರೇಮಠ, ರಾಜು ಪಾಚಮಘೆ, ಅರುಣ ಪ್ರಭು, ಸುನೀಲ ಕಟ್ಟಿಮನಿ, ಗಂಗಾಧರ ಶೆಟ್ಟರ, ದೀಪಕ ಬೊಮ್ಮಸಾಗರ ಇದ್ದರು.