ಕೇವಲ ಐದು ರೂಪಾಯಿಯ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್‌ನಲ್ಲಿ ತೂಕ ಕಡಿಮೆ ಇದ್ದಿದ್ದಕ್ಕಾಗಿ ಜಾಗತಿಕ ಬ್ರ್ಯಾಂಡ್ ಪೆಪ್ಸಿಕೋಗೆ ಗ್ರಾಹಕರ ನ್ಯಾಯಾಲಯ ಬಿಸಿ ಮುಟ್ಟಿಸಿದೆ. 15 ಗ್ರಾಂ ಎಂದು ನಮೂದಿಸಲಾಗಿದ್ದ ಲೇಸ್ (Lay’s) ಪ್ಯಾಕೆಟ್‌ನಲ್ಲಿ ಕೇವಲ 4 ಗ್ರಾಂ ಚಿಪ್ಸ್ ಇದ್ದಿದ್ದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ ಜೈಪುರದ ಗ್ರಾಹಕರೊಬ್ಬರಿಗೆ ರೂ.8,000 ಪರಿಹಾರ ನೀಡುವಂತೆ ಗ್ರಾಹಕರ ವೇದಿಕೆ ಮಹತ್ವದ ತೀರ್ಪು ನೀಡಿದೆ.
ಜೈಪುರದ ಚಂದ್ರಮಾನ್ ಜಲನ್ ಎಂಬುವವರು 2020ರ ನವೆಂಬರ್ 10 ರಂದು ಮನೆಗೆ ಬಂದ ಅತಿಥಿಗಳಿಗೆ ನೀಡಲು ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಮಳಿಗೆಯಿಂದ ರೂ. 5 ಮುಖಬೆಲೆಯ ಲೇಸ್ ಪ್ಯಾಕೆಟ್ ಖರೀದಿಸಿದ್ದರು. ಬಡಿಸುವ ವೇಳೆ ಪ್ಯಾಕೆಟ್ ಅತಿ ಹಗುರವೆನಿಸಿದಾಗ ತೂಕ ಮಾಡಿದಾಗ, 15 ಗ್ರಾಂ ಬದಲಿಗೆ ಕೇವಲ 4 ಗ್ರಾಂ ಚಿಪ್ಸ್ ಇರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಮಳಿಗೆಯಿಂದ ಸೂಕ್ತ ಸ್ಪಂದನೆ ಸಿಗದಿದ್ದಾಗ, ಅವರು ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿಯನ್ನು ಪ್ರಶ್ನಿಸಿ 2022ರ ಏಪ್ರಿಲ್‌ನಲ್ಲಿ ಜೈಪುರದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಪ್ಯಾಕ್ ಮಾಡಿದ ಉತ್ಪನ್ನದಲ್ಲಿ ತೂಕ ಕಡಿಮೆಯಿರುವುದು ನೇರವಾಗಿ ಉತ್ಪಾದಕ ಕಂಪನಿಯ ಜವಾಬ್ದಾರಿಯೇ ಹೊರತು ಮಾರಾಟಗಾರ ಮಳಿಗೆಯದ್ದಲ್ಲ ಎಂದು ಸ್ಪಷ್ಟಪಡಿಸಿತು.
ನೋಟಿಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗದ ಪೆಪ್ಸಿಕೋ ಇಂಡಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಗ್ರಾಹಕರಿಗೆ ಪ್ಯಾಕೆಟ್‌ನ 5 ರೂಪಾಯಿ ಹಣವನ್ನು ಶೇ. 6ರ ಬಡ್ಡಿದರದೊಂದಿಗೆ ವಾಪಸ್ ನೀಡಲು ಸೂಚಿಸಿದೆ. ಜತೆಗೆ ಮಾನಸಿಕ ಕಿರುಕುಳಕ್ಕೆ 5 ಸಾವಿರ ರೂಪಾಯಿ ಹಾಗೂ ವ್ಯಾಜ್ಯ ವೆಚ್ಚವಾಗಿ 3 ಸಾವಿರ ರೂಪಾಯಿ ಸೇರಿ ಒಟ್ಟು ರೂ.8,000 ಪರಿಹಾರವನ್ನು ಒಂದು ತಿಂಗಳೊಳಗೆ ಪಾವತಿಸಲು ಪೆಪ್ಸಿಕೋಗೆ ಖಡಕ್ ಆದೇಶ ನೀಡಿದೆ.






















