ಬಾಗಲಕೋಟೆ: ಸಮಾಜದ ಹಿತ ಕಾಪಾಡಾವುದು ನಮ್ಮೆಲ್ಲರ ಕರ್ತವ್ಯ. ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ತ್ಯಾಗಕ್ಕೂ ಸಿದ್ಧವೆಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಭದ್ರನ್ನವರ ಸ್ಪಷ್ಟಪಡಿಸಿದರು.
ಬನಹಟ್ಟಿಯ ಬಂಗಾರೆವ್ವ ತಟ್ಟಿಮನಿ ಸಭಾಂಗಣದಲ್ಲಿ ಸಾವಿರಾರು ಹಟಗಾರ ಬಾಂಧವರಿಂದ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಟಗಾರ ಸಮುದಾಯದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿಯವರ ಬೆನ್ನಿಗೆ ನಿಂತು ಮಾತನಾಡಿದ ಅವರು, ಹಟಗಾರ ಸಮಾಜದ ಒಗ್ಗಟ್ಟು ಪ್ರದರ್ಶನ ಬಲಗೊಳ್ಳುತ್ತಿದೆ. ಪಕ್ವಕಾಲವಾಗಿದ್ದು, ಬರುವ ವಿಧಾನಸಭೆ ಚುನಾವಣೆಗೆ ಪಕ್ಷದಿಂದ ಟಿಕೆಟ್ ತರುವಲ್ಲಿ ಪ್ರತಿಯೊಬ್ಬರ ಬಲಪ್ರದರ್ಶನ ಅನಿವಾರ್ಯವಾಗಿದೆ ಎಂದರು.
ಇನ್ನೋರ್ವ ಕಾಂಗ್ರೆಸ್ ಮುಖಂಡ ಮಲ್ಲಪ್ಪ ಭಾವಿಕಟ್ಟಿ ಮಾತನಾಡಿ, ಪಕ್ಷಾತೀತವಾಗಿ ಹಟಗಾರ ಸಮಾಜದಿಂದ ಸ್ಪರ್ಧೆಗಿಳಿಯುವ ವ್ಯಕ್ತಿಯನ್ನು ಬೆಂಬಲಿಸುವ ಗುರಿಯಿಂದ ಪಕ್ಷ ಬಿಟ್ಟು ಬೆಂಬಲಿಸುವದಾಗಿ ಸ್ಪಷ್ಟಪಡಿಸಿ, ನೇಕಾರ ಪ್ರಧಾನ ಕ್ಷೇತ್ರವಾಗಿರುವ ತೇರದಾಳ ವಿಧಾನಸಭೆಗೆ ನೇಕಾರರೇ ಪ್ರತಿನಿಧಿಸುವ ಶಕ್ತಿ ಹೊಂದಬೇಕು.
ಒಡೆದು ಆಳುವ ಪ್ರವೃತ್ತಿ ಹೊಂದಿರುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿ, ಸಮಾಜ ಬಲಿಷ್ಠತೆಗೆ ಮೊದಲ ಆದ್ಯತೆಯಾಗಿದ್ದು, ಹಟಗಾರ ಸಮುದಾಯವು 50 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದ್ದು, ನೇಕಾರರೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿ ರಾಜಕೀಯ ಕ್ಷೇತ್ರ ನಮ್ಮದಾಗಿಸಿಕೊಳ್ಳಬೇಕೆಂದರು.ರಾಷ್ಟ್ರಿಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಉಭಯ ಪಕ್ಷಗಳು ನೇಕಾರ ಸಮುದಾಯಕ್ಕೆ ರಾಜಕೀಯ ಗರಡಿ ಮನೆ ತೋರಿಸದೆ ಕೇವಲ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿ ಅನ್ಯಾಯವೆಸಗುವಲ್ಲಿ ಪಕ್ಷಗಳ ನೇತಾರರು ಕಾರಣರಾಗಿದ್ದಾರೆ. ಇವೆಲ್ಲದಕ್ಕೂ ಸಮಾಜದಿಂದ ತಕ್ಕ ಪಾಠ ಕಲಿಸಬೇಕೆಂದರು.