ಬಿಲ್ಲವ ಈಡಿಗರಿಗೆ ನಿಗಮ: ಮಾತು ತಪ್ಪಿದ ಮುಖ್ಯಮಂತ್ರಿ

0
11

ಮಂಗಳೂರು: ರಾಜ್ಯದಲ್ಲಿ ಸುಮಾರು ೨೬ ಲಕ್ಷ ಜನಸಂಖ್ಯೆ ಹೊಂದಿರುವ ೨೬ ಒಳ ಜಾತಿಗಳನ್ನೊಳಗೊಂಡಿರುವ ಬಿಲ್ಲವ ಈಡಿಗ ಸಮುದಾಯದ ಅಭಿವೃದ್ಧಿಗೆ ನಿಗಮ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿಯವರು ತನ್ನ ಭರವಸೆಯನ್ನು ಈಡೇರಿಸದೆ ಮಾತು ತಪ್ಪಿದ್ದಾರೆ, ಈಗ ನಡೆಯುತ್ತಿರುವ ಬಜೆಟ್ ಅಧಿವೇಶನ ಫೆ. ೨೪ರ ತನಕ ನಡೆಯಲಿದ್ದು, ಸರಕಾರ ತನ್ನ ಮಾತಿನಂತೆ ನಡೆದುಕೊಂಡು ನಿಗಮ ನೀಡಿ, ೫೦೦ ಕೋಟಿ ಒದಗಿಸಬೇಕು, ಇಲ್ಲವಾದಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಎಚ್ಚರಿಸಿದ್ದಾರೆ.
ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೮ ವರ್ಷಗಳ ಹಿಂದೆ ಶೇಂದಿ ನಿಷೇಧ ಜಾರಿಯಾದಾಗಲೇ ನಿಗಮ ಆಗಬೇಕಿತ್ತು, ನಿಗಮಕ್ಕಾಗಿ ನಿರಂತರ ನಾಲ್ಕು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಜನವರಿಯಲ್ಲಿ ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದೇವು. ಈ ಸಂದರ್ಭ ಮುಖ್ಯಮಂತ್ರಿಗಳು ಬೆಂಗಳೂರಿಗೆ ಕರೆಸಿ ಸಭೆ ನಡೆಸಿ ಮುಂದಿನ ಬಜೆಟ್‌ನಲ್ಲಿ ನಿಗಮ ಘೋಷಿಸುವುದಾಗಿ ತಿಳಿಸಿದ್ದರು. ಆಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಸುನಿಲ್ ಕುಮಾರ್ ವೇದಿಕೆಯಲ್ಲಿದ್ದರು. ಇಂದು ಘೋಷಣೆಯಾದ ಮುಂಗಡಪತ್ರದಲ್ಲಿ ಮುಖ್ಯಮಂತ್ರಿಗಳು ಮಾತು ತಪ್ಪಿದ್ದಾರೆ. ಇತ್ತೀಚೆಗೆ ಪ್ರಣವಾನಂದ ಸ್ವಾಮೀಜ ನಡೆಸಿದ ಪಾದಯಾತ್ರೆಯ ಸಮಾರೋಪದಲ್ಲಿ ಕೂಡ ನಿಗಮ ರಚಿಸಲಾಗುವುದು ಎಂದು ಸಚಿವರು ಘೋಷಿಸಿದ್ದರು. ಬಜೆಟ್‌ನಲ್ಲಿ ಘೋಷಣೆ ಆಗದಿದ್ದರೆ ಇನ್ನು ನಿಗಮ ಮರೀಚಿಕೆಯಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಸಾಕಿತ್ತು, ಮುಂದೆ ಯಾವ ಸರ್ಕಾರ ಬಂದರೂ ನಿಗಮ ಅಧಿಕೃತವಾಗಿ ಇರುತ್ತಿತ್ತು ಎಂದರು.
ಸರಕಾರ ಈಗಾಗಲೇ ಘೋಷಿಸಿರು ನಾರಾಯಣ ಗುರು ವಸತಿ ಶಾಲೆ ಎಲ್ಲ ಸಮಾಜಕ್ಕೆ ಸಂಬಂಧಿಸಿದ್ದು. ಬಿಲ್ಲವ ಸಮಾಜದ ಬದುಕಿನ ಏಳಿಗೆ ಆಗುವುದಿಲ್ಲ. ಶೈಕ್ಷಣಿಕ, ಆರ್ಥಿಕ ಏಳಿಗೆಗೆ ನಿಗಮ ಅಗತ್ಯವಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕೆಲಸ ರಾತ್ರಿ ಬೆಳಗಾಗುವ ಒಳಗೆ ಆಗುತ್ತದೆ. ಈ ಕೆಲಸ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
೧೫ ಜಿಲ್ಲೆಗಳಲ್ಲಿ ನಾರಾಯಣ ಗುರು ವಿಚಾರ ವೇದಿಕೆ ಸಂಘಟನೆ ಇದೆ. ರಾಜ್ಯಾದ್ಯಂತ ಹೋರಾಟದ ಶಕ್ತಿ ಇದೆ. ಮುಂದೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಅದಕ್ಕಿಂತ ಮೊದಲು ಸರ್ಕಾರದಿಂದ ಆದ ಲೋಪ ಸರಿಪಡಿಸಿ ಎಂದು ಆಗ್ರಹಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೆಸರು, ಮಂಗಳೂರು ವಿಮಾನ ನಿಲದ್ದಾಣಕ್ಕೆ ಕೋಟಿ ಚನ್ನಯ ಹೆಸರಿಡಿ. ಸಿಗಂದೂರು ಕ್ಷೇತ್ರದ ರಾಮಪ್ಪರ ಮೇಲಿನ ಪ್ರಕರಣವನ್ನು ಸರಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಬಿಲ್ಲವ ಮುಖಂಡ ಆರ್. ಪದ್ಮರಾಜ್ ಮಾತನಾಡಿ, ಲಿಂಗಾಯಿತ, ಒಕ್ಕಲಿಗ ಮರಾಠಾ ಸಮುದಾಯಕ್ಕೆ ನಿಗಮ ನೀಡಿರುವುದು ಸಂತೋಷ. ಆದರೆ ಬಿಲ್ಲವರ ಬೇಡಿಕೆಗೆ ಮಣ್ಣೆರಚಿದಿರಿ.
ವಿಶ್ವಾಸ ಹೋಗಿ ಸಮುದಾಯಕ್ಕೆ ನಿರಾಶೆಯಾಗಿದೆ. ಸರ್ಕಾರ ನಂಬಿ ಸಾವಿರಾರು ಯುವಕರು ಇದ್ದರು. ಸಚಿವರು, ಶಾಸಕರು ಈಗ ಉತ್ತರ ನೀಡಿ ಎಂದ ಅವರು, ಮುಂದೆ ಸಮಾಜ ಕಠಿಣ ಹೋರಾಟ ಮಾಡಲಿದೆ. ಇದನ್ನು ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದರು. ದೇವೇಂದ್ರ ಪೂಜಾರಿ, ಅಕ್ಷಿತ್ ಸುವರ್ಣ, ರಾಜೇಂದ್ರ ಚಿಲಿಂಬಿ, ಸೂರ್ಯ ಜಯಸುವರ್ಣ ಉಪಸ್ಥಿತರಿದ್ದರು.

Previous articleಕಾಂಗ್ರೆಸ್ಸಿಗರು ಶಾಶ್ವತವಾಗಿ ಕಿವಿಗೆ ಹೂವಿಟ್ಟು ತಿರುಗಬೇಕು
Next articleಮಹಾಬಲೇಶ್ವರನಿಗೆ ವಿಶೇಷ ಪೂಜೆ