SK Home Ad
Home ಸುದ್ದಿ ರಾಜ್ಯ ನಿರುದ್ಯೋಗಕ್ಕೆ ಬ್ರೇಕ್: ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿ ಎಂದು ರಾಜ್ಯಗಳಿಗೆ ನಿತಿನ್ ಗಡ್ಕರಿ ಮನವಿ!

ನಿರುದ್ಯೋಗಕ್ಕೆ ಬ್ರೇಕ್: ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿ ಎಂದು ರಾಜ್ಯಗಳಿಗೆ ನಿತಿನ್ ಗಡ್ಕರಿ ಮನವಿ!

0
57

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯ ಸರ್ಕಾರಗಳಿಗೆ ಒಂದು ಮಹತ್ವದ ಮನವಿ ಮಾಡಿದ್ದಾರೆ. ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ‘ಬೈಕ್ ಟ್ಯಾಕ್ಸಿ’ (Bike Taxi) ಸೇವೆ ನಡೆಸಲು ಅವಕಾಶ ನೀಡುವಂತೆ ಅವರು ಸೂಚಿಸಿದ್ದಾರೆ.

ಈ ಕುರಿತು ಬುಧವಾರ ಮಾತನಾಡಿದ ಅವರು, ಸಾರಿಗೆ ವಿಷಯವು ರಾಜ್ಯಗಳ ವ್ಯಾಪ್ತಿಗೆ ಬರುವುದರಿಂದ ಬೈಕ್ ಟ್ಯಾಕ್ಸಿ ಸೇವೆ ಜಾರಿಗೆ ತರುವ ಬಗ್ಗೆ ಆಯಾ ರಾಜ್ಯ ಸರ್ಕಾರಗಳೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. ವಿಶೇಷವಾಗಿ ಉದ್ಯೋಗಾವಕಾಶಗಳು ಕಡಿಮೆ ಇರುವ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯು ಜನರಿಗೆ ಹೊಸ ಆದಾಯದ ಮೂಲವಾಗಲಿದೆ. ಇದರಿಂದ ದೇಶಾದ್ಯಂತ ಸುಮಾರು 8 ಕೋಟಿ ಜನರಿಗೆ ಉದ್ಯೋಗ ಲಭಿಸುವ ಸಾಧ್ಯತೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧವೂ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಚಾಲಕರಿಗೆ ಸುರಕ್ಷಿತ ಚಾಲನೆಯ ಬಗ್ಗೆ ಸೂಕ್ತ ತರಬೇತಿ ಮತ್ತು ಆರೋಗ್ಯ ತಪಾಸಣೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು. ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವಾಗ ವಿಮೆ ಮತ್ತು ಪರವಾನಗಿ ವಿಷಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ರಾಜ್ಯಗಳಿಗೆ ಕಿವಿಮಾತು ಹೇಳಿದರು.