ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಅವರ ಹೊಸ ಆತ್ಮಕತೆ ‘ವ್ಯೂ ಫ್ರಮ್ ದಿ ಈಸ್ಟ್ ವಿಂಗ್: ಎ ಮೆಮೊಯಿರ್’ ಈ ವಾರವಷ್ಟೇ ಬಿಡುಗಡೆಯಾಗಿದ್ದು, ಅದರಲ್ಲಿರುವ ಒಂದು ವಿಶೇಷ ಪ್ರಸಂಗ ಈಗ ಜಾಗತಿಕೆ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಉಡುಗೊರೆಯಾಗಿ ನೀಡಿದ್ದ ಒಂದು ಅಮೂಲ್ಯವಾದ ವಜ್ರದ ಕಥೆಯನ್ನು ಅವರು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ, ಅಂದರೆ 2023ರ ಜೂನ್‌ನಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಾಗೆ ಅಧಿಕೃತ ಭೇಟಿ ನೀಡಿದ್ದಾಗ, ಜಿಲ್ ಬೈಡನ್ ಅವರಿಗೆ 7.5 ಕ್ಯಾರೆಟ್‌ನ ಕೃತಕವಾಗಿ ತಯಾರಿಸಿದ, ಅಂದರೆ ಲ್ಯಾಬ್-ಗ್ರೋನ್ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು.
ಭಾರತವು ಪರಿಸರಸ್ನೇಹಿ ಮತ್ತು ತಂತ್ರಜ್ಞಾನ ಆಧಾರಿತ ವಜ್ರದ ಉದ್ಯಮದಲ್ಲಿ ಜಾಗತಿಕ ನಾಯಕನಾಗಲು ಹೆಜ್ಜೆ ಇಡುತ್ತಿರುವುದರ ಸಂಕೇತವಾಗಿ ಮೋದಿ ಈ ವಿಶೇಷ ಉಡುಗೊರೆಯನ್ನು ನೀಡಿದ್ದರು. ಅತ್ಯಂತ ಆಕರ್ಷಕವಾಗಿದ್ದ ಆ ವಜ್ರವನ್ನು ಕಂಡ ತಕ್ಷಣ ಜಿಲ್ ಬೈಡನ್ ಅವರಿಗೆ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕೆಂಬ ಆಸೆ ಮೂಡಿತ್ತು. ಸ್ವತಃ ಪ್ರಧಾನಿ ಮೋದಿ ಅವರೇ ಆ ವಜ್ರವನ್ನು ತಮ್ಮ ತವರು ರಾಜ್ಯದಲ್ಲಿ ಕೇವಲ 2,500 ಡಾಲರ್ ವೆಚ್ಚದಲ್ಲಿ ತಯಾರಿಸಲಾಗಿದೆ ಎಂದು ಹೇಳಿ, ಅದಕ್ಕೆ ಸಂಬಂಧಿಸಿದ ಬಿಲ್ ಅನ್ನು ಸಹ ನೀಡಿದ್ದರು. ಭಾರತದ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ಎರಡು ಲಕ್ಷ ರೂಪಾಯಿಗಳಾಗುವುದರಿಂದ, ಅಮೆರಿಕಾದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ಹಣ ಪಾವತಿಸಿ ಆ ವಜ್ರವನ್ನು ತಾವೇ ಖರೀದಿಸಲು ಜಿಲ್ ಬೈಡನ್ ನಿರ್ಧರಿಸಿದ್ದರು.
ಆದರೆ, ಅಮೆರಿಕಾದ ವಿದೇಶಾಂಗ ಇಲಾಖೆಯು ಆ ವಜ್ರದ ಮೌಲ್ಯವನ್ನು ಅಧಿಕೃತವಾಗಿ ಮೌಲ್ಯೀಕರಿಸಿದಾಗ ಜಿಲ್ ಬೈಡನ್ ಅವರಿಗೆ ದೊಡ್ಡ ಆಘಾತ ಕಾಯುತ್ತಿತ್ತು. ಸರ್ಕಾರಿ ಅಧಿಕಾರಿಗಳು ಆ ವಜ್ರದ ನಿಜವಾದ ಮಾರುಕಟ್ಟೆ ಮೌಲ್ಯ ಬರೋಬ್ಬರಿ 20,000 ಡಾಲರ್, ಅಂದರೆ ಸುಮಾರು ಹದಿನಾರು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಿದರು. ಅಮೆರಿಕಾದ ನೈತಿಕ ನಿಯಮಗಳ ಪ್ರಕಾರ, ಶ್ವೇತಭವನದಲ್ಲಿರುವಾಗ ಪ್ರಥಮ ಕುಟುಂಬಕ್ಕೆ ಸಿಗುವ ದುಬಾರಿ ಉಡುಗೊರೆಗಳು ವೈಯಕ್ತಿಕ ಸ್ವತ್ತಾಗದೆ ಫೆಡರಲ್ ಸರ್ಕಾರಕ್ಕೆ ಸೇರುತ್ತವೆ. ಒಂದು ವೇಳೆ ಅದನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಾದರೆ, ಸರ್ಕಾರ ನಿಗದಿಪಡಿಸಿದ ಪೂರ್ಣ ಮಾರುಕಟ್ಟೆ ಮೌಲ್ಯವನ್ನು ಪಾವತಿಸಬೇಕಾಗುತ್ತದೆ. ವಜ್ರದ ಬೆಲೆ ನಿರೀಕ್ಷೆಗಿಂತ ಗಗನಕ್ಕೇರಿದ್ದರಿಂದ ಜಿಲ್ ಬೈಡನ್ ಅದನ್ನು ಖರೀದಿಸುವ ಆಲೋಚನೆಯನ್ನು ಕೈಬಿಡಬೇಕಾಯಿತು. ಆದಾಗ್ಯೂ, ನಿಯಮಗಳ ಪ್ರಕಾರ ಅಧಿಕೃತ ಕಾರ್ಯಕ್ರಮಗಳಲ್ಲಿ ಧರಿಸಲು ಅದನ್ನ ಎರವಲು ಪಡೆಯುವ ಅವಕಾಶವಿದ್ದಿದ್ದರಿಂದ, ಜಿಲ್ ಬೈಡನ್ ಆ ವಜ್ರವನ್ನು ಒಂದು ಸುಂದರವಾದ ಉಂಗುರದಲ್ಲಿ ಜಡಿಸಿ ಶ್ವೇತಭವನದ ಅಧಿಕೃತ ಸಮಾರಂಭಗಳಲ್ಲಿ ಧರಿಸುತ್ತಿದ್ದರು.
ಬೈಡನ್ ದಂಪತಿಯ ಶ್ವೇತಭವನದ ಅಧಿಕಾರಾವಧಿ ಮುಗಿದ ತಕ್ಷಣವೇ ಜಿಲ್ ಬೈಡನ್ ಆ ಉಂಗುರವನ್ನು ಮರಳಿ ಸರ್ಕಾರದ ಉಗ್ರಾಣಕ್ಕೆ ಒಪ್ಪಿಸಿದರು. ಅಮೆರಿಕಾದ ಅಧ್ಯಕ್ಷೀಯ ಉಡುಗೊರೆಗಳನ್ನು ಸಂಗ್ರಹಿಸಿಡುವ ಬೃಹತ್ ಗೋದಾಮಿಗೆ ಈಗ ಆ ವಜ್ರದ ಉಂಗುರ ಸೇರಿದೆ. ತಮ್ಮ ಪುಸ್ತಕದಲ್ಲಿ ಜಿಲ್ ಬೈಡನ್ ಅವರು ಫ್ರಾನ್ಸ್‌ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್ ನೀಡಿದ್ದ ಕಡಗವನ್ನು ತಾವು ಹಣ ನೀಡಿ ಖರೀದಿಸಿ ಇಟ್ಟುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ, ಆದರೆ ಮೋದಿ ನೀಡಿದ ವಜ್ರ ಮಾತ್ರ ಕೇವಲ ನೆನಪಾಗಿ ಉಳಿಯುವಂತಾಯಿತು. ಜಿಲ್ ಬೈಡನ್ ಅವರ ಈ ಆತ್ಮಕಥೆಯು ಶ್ವೇತಭವನದ ಕಟ್ಟುನಿಟ್ಟಾದ ಹಣಕಾಸು ಮತ್ತು ರಾಜತಾಂತ್ರಿಕ ನಿಯಮಗಳು ಎಷ್ಟು ಪಾರದರ್ಶಕವಾಗಿರುತ್ತವೆ ಎಂಬುದನ್ನು ಜಗತ್ತಿಗೆ ಪರಿಚಯಿಸಿದೆ, ಜೊತೆಗೆ ಭಾರತೀಯ ವಜ್ರದ ಉದ್ಯಮದ ಗುಣಮಟ್ಟ ಮತ್ತು ಜಾಗತಿಕ ಮೌಲ್ಯ ಎಷ್ಟು ಉನ್ನತವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿದೆ.




















