Home Advertisement
Home ಅಪರಾಧ ವಾಸ್ತು ಗುರೂಜಿ ಕೊಲೆ: 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ವಾಸ್ತು ಗುರೂಜಿ ಕೊಲೆ: 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

0
125
vaastu guruji

ಹುಬ್ಬಳ್ಳಿ: ಮೂರು ತಿಂಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ಅವರು ಆರೋಪಿಗಳಿಬ್ಬರ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಚಂದ್ರಶೇಖರ್ ಗುರೂಜಿ ಮತ್ತು ಆರೋಪಿಗಳಿಬ್ಬರ ನಡುವಿನ ಆಸ್ತಿ ವಿವಾದ ಸೇರಿದಂತೆ ಇತರ ವಿಷಯಗಳಿಗೆ ಸಂಬಂಧಿಸಿದ ವಿವರಗಳನ್ನು ಈ ದೋಷಾರೋಪ ಪಟ್ಟಿ ಒಳಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಉಣಕಲ್ ಬಳಿಯಲ್ಲಿನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಜುಲೈ 5ರಂದು ಮಧ್ಯಾಹ್ನದ ವೇಳೆಯಲ್ಲಿಯೇ ಚಂದ್ರಶೇಖರ್ ಗುರೂಜಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಗುರೂಜಿಯ ಆಪ್ತರಾಗಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಎಂಬುವರನ್ನು ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗದ ಬಳಿ ಬಂಧಿಸಿದ್ದರು.
ಪ್ರಕರಣದ ತನಿಖೆಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಅವರು ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಗುರೂಜಿ ಮತ್ತು ಆರೋಪಿಗಳ ನಡುವೆ ಇದ್ದ ವ್ಯವಹಾರಗಳು ಸೇರಿದಂತೆ ವಿವಿಧ ಆಯಾಮಗಳ ಕುರಿತು ತಂಡವು ಸತತ ಮೂರು ತಿಂಗಳಿಂದ ತನಿಖೆ ನಡೆಸಿ ಅಂತಿಮವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.