ರಾಧಾಕೃಷ್ಣ ಭಟ್ಟ
ಭಟ್ಕಳ: ಚಿತ್ರ ಪ್ರೇಮಿಗಳ ಮನಗೆದ್ದಿರುವ ರಿಷಿಬ್ ಶೆಟ್ಟಿಯವರ “ಕಾಂತಾರ” ಚಲನಚಿತ್ರದಲ್ಲಿ ಭಟ್ಕಳದ ಯುವತಿಯೋರ್ವಳು ಸಹ ನಟಿಯಾಗಿ ಅವಕಾಶ ಪಡೆದು ಗಮನ ಸೆಳೆದಿದ್ದಾಳೆ.
ನಗರದ ಮೂಡಭಟ್ಕಳದ ನಿವಾಸಿ ರಮ್ಯಾ ಕೃಷ್ಣ ನಾಯ್ಕ ಕಾಂತಾರ ಸಿನೆಮಾದಲ್ಲಿ ರಾಣಿಯ ಪಾತ್ರ ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂಡಭಟ್ಕಳದ ಕಾಟಿಮನೆ ಕೃಷ್ಣ ಲಚ್ಮಯ್ಯ ನಾಯ್ಕ ಹಾಗೂ ಪ್ರಭಾವತಿ ನಾಯ್ಕ ದಂಪತಿಯ ಪುತ್ರಿಯಾದ ಈಕೆ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಮುಗಿಸಿ ಪಿ.ಯು. ಶಿಕ್ಷಣವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ನಂತರ ಬೆಂಗಳೂರಿನ ಅಂಬೇಡ್ಕರ್ ಯುನಿರ್ವಸಿಟಿಯಲ್ಲಿ ಬಿ.ಇ. ಪದವಿಯನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿ 2016ರಲ್ಲಿ ಟಾಪ್ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ಖ್ಯಾತ ಚಿತ್ರನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದರು.
ನಂತರದ ದಿನಗಳಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹೆಗ್ಗಳಿಕೆಯೂ ಅವರದಾಗಿದೆ.
ಅನೇಕ ಕಿರು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತಿದ್ದು, ಧರಣಿ ಮಂಡಳ ಮಧ್ಯದೊಳಗೆ, ನೋಡಿದವರು ಏನೆಂತಾರೆ, ಲಾಸ್ಟ್ ಆರ್ಡರ್ ಹಾಗೂ ಆಶ್ವಿನಿ ಪುನೀತ್ ರಾಜಕುಮಾರವರು ನಿರ್ದೇಶಿಸಿದ ಕಿರುಚಿತ್ರ “ದ ಬೆಲ್”ನಲ್ಲಿ ಕೂಡಾ ನಟಿಸಿದ್ದಾರೆ. ಇತ್ತೀಚಿನ ತಮಿಳು ಚಿತ್ರ “ನಿರಮ್ ಮಾರುಮ್ ಉಳಗಿಲ್” ಚಿತ್ರದಲ್ಲಿ ನಾಯಕಿ ನಟಿಯಾಗಿ ನಟಿಸಿದ್ದಾರೆ.
ವಿವಿಧ ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಕಂಪನಿಗಳಾದ ಟ್ಯಾಲಿ, ಎ.ವಿ.ಟಿ. ಚಹಾ ಕಂಪನಿ, ಅಮುಲ್ ಇಂಡಿಯಾ, ಹಿಮಾಲಯ, ಪೀಟರ್ ಇಂಗ್ಲೆಂಡ್ ಕಂಪನಿಯ ಜಾಹೀರಾತುಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉದ್ಯೋನ್ಮುಖ ತಾರೆ ಎಂಬ ಭರವಸೆ ಹುಟ್ಟಿಸಿದ್ದಾರೆ.
ಚಿಕ್ಕಂದಿನಿಂದ ಕನ್ನಡ ಸಿನಿಮಾ ನೋಡುತ್ತಿದ್ದ ಈಕೆ ತಾನು ಏನಾದರೂ ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಹೋಗಿ ಖ್ಯಾತ ಹೊಂಬಾಳೆ ಫಿಲಂ ಸಂಸ್ಥೆ ನಡಸಿದ ಸ್ಕ್ರೀನ್ ಟೆಸ್ಟ್ನಲ್ಲಿ ಉತ್ತೀರ್ಣಗೊಂಡರು. ನಂತರ ಕಾಂತಾರ-2 ಚಿತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.