-: ಕೀರ್ತಿಶೇಖರ ಕಾಸರಗೋಡ
ಬೆಳಗಾವಿ ಜಿಲ್ಲೆಯಲ್ಲಿ ಇದೀಗ ಶಾವಿಗೆ ಎಳೆಗಳ ಸದ್ದು ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸುತ್ತಿರುವ ಶಾವಿಗೆ ಉತ್ಪನ್ನಕ್ಕೆ `ಬೆಳಗಾವಿ ಸಂಜೀವಿನಿ ಶಾವಿಗೆ’ ಬ್ರ‍್ಯಾಂಡ್ ವರವಾಗಿದೆ.
ಕೌಶಲ್ಯಾಅಭಿವೃದ್ಧಿ ಉದ್ಯಮ ಶೀಲತಾ ಮತ್ತು ಜೀವನೋಪಾಯ ಇಲಾಖೆಯಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯು ಕರ್ನಾಟಕದಲ್ಲಿ ಸಂಜೀವಿನಿ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಯೋಜನೆಯು ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ದಾರಿ ತೋರಿಸುತ್ತಾ ಸಾಗುತ್ತಿದೆ.
ಪ್ರತಿ ಕುಟುಂಬದ ಕನಿಷ್ಠ ಒಬ್ಬಳು ಮಹಿಳೆ ಈ ಯೋಜನೆಯ ಲಾಭ ಪಡೆಯುವ ಮೂಲಕ ಸ್ವ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿಯಾಗಿ ಸಮಾಜದಲ್ಲಿ ಬದುಕಲು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಂಜೀವಿನಿ ಘಟಕ ಬೆನ್ನೆಲುಬಾಗಿ ನಿಂತಿದೆ.
ಸಂಜೀವಿನಿ ಯೋಜನೆಯಡಿಯಲ್ಲಿ ಗ್ರಾಪಂ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ರಚನೆಯಾಗಿ, ಸ್ವ-ಸಹಾಯ ಸಂಘದ ಮಹಿಳೆಯರು ಶಾವಿಗೆ ಉತ್ಪಾದನೆ ಮಾಡುತ್ತಿದ್ದು ಈ ಉತ್ಪನ್ನಕ್ಕೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಕೊರತೆ ಇದೆ.
ಜಿಲ್ಲೆಯಲ್ಲಿ ಸುಮಾರು 204 ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರು ಶಾವಿಗೆ ಉತ್ಪನ್ನದಲ್ಲಿ ತೊಡಗಿದ್ದು, ಸಂಜೀವಿನಿ ಯೋಜನೆಯು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಆಸಕ್ತಿ ಇರುವ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಿ ಉತ್ಪನ್ನಕ್ಕೆ “ಬೆಳಗಾವಿ ಸಂಜೀವಿನಿ ಶಾವಿಗೆ” ಎಂಬ ಶೀರ್ಷಿಕೆಯಡಿ ಬ್ರ್ಯಾಡಿಂಗ್ ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ತಯಾರಿಸಲಾಗಿದೆ.
ಎನ್.ಆರ್.ಎಲ್.ಎಂ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಸದಸ್ಯೆಯರನ್ನು ಈಗಾಗಲೆ ಹೋಟೆಲ್ ಉದ್ಯಮದಲ್ಲಿ ತೊಡಗಿಸಿ, ಅವರ ಸ್ವಾವಲಂಬಿ ಜೀವನಕ್ಕೆ ನೆರವಾಗುವ ಉದ್ದೇಶದಿಂದ ರಾಷ್ಟ್ರೀಯ ಜೀವನೋಪಾಯ ಮಿಷನ್(ಎನ್‌ಎಲ್‌ಎಂ) ಅಕ್ಕ ಕೆಫೆ ಆರಂಭಿಸಿದೆ. ಅದೆ ರೀತಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವಸರ್ ಎಂಬ ಹೆಸರಿನಲ್ಲಿ, ಬೆಳಗಾವಿ ಸೇರಿದಂತೆ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಒನ್ ಸ್ಟೇಶನ ಒನ್ ಪ್ರಾಡಕ್ಟ್ ಹೆಸರಿನಲ್ಲಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿ ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಅದೇ ಮಾದರಿಯಲ್ಲಿ `ಬೆಳಗಾವಿ ಸಂಜೀವಿನಿ ಶಾವಿಗೆ’ ಬ್ರಾಡಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದೆ. 2 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸ್ವ- ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಸಂಘದ ಸದಸ್ಯರಿಗೆ ತರಬೇತಿ ಹಾಗೂ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ.
ನಗರ ಪ್ರದೇಶದಂತೆ ವಿವಿಧ ಕಡೆಗಳಲ್ಲಿ ಸರಿಯಾದ ಮಾರುಕಟ್ಟೆ ದೊರೆತರೆ ಬೆಳಗಾವಿ ಶಾವಿಗೆ ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ಆಗಬಲ್ಲದು. ಸರ್ಕಾರಿ ಸಹಾಯಧನ, ಸಹಕಾರ ಸಂಘಗಳ ಬೆಂಬಲ, ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿ ಪ್ರೋತ್ಸಾಹ ದೊರೆತರೆ ಹಳ್ಳಿ ಶಾವಿಗೆ ದಿಲ್ಲಿಯಲ್ಲೂ ಹೆಸರು ಮಾಡಲಿದೆ ಎಂಬ ಭರವಸೆ ಅಧಿಕಾರಿಗಳದ್ದು.
ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಸಂಜೀವಿನಿ ಜಿಲ್ಲಾ ಮತ್ತು ತಾಲೂಕು ಅಭಿಯಾನ ನಿರ್ವಹಣಾ ಘಟಕದ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ಶಾವಿಗೆ ಉತ್ಪನ್ನಕ್ಕೆ “ಬೆಳಗಾವಿ ಸಂಜೀವಿನಿ ಶಾವಿಗೆ” ಎಂಬ ಶೀರ್ಷಿಕೆಯಡಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ.
ಪಾಲುದಾರಿಕೆ : 450 ಗ್ರಾಮ ಪಂಚಾಯತಗಳು. 204 ಸ್ವ ಸಹಾಯ ಸಂಘಗಳು. 2 ಸಾವಿರ ಮಹಿಳೆಯರು
ಎಲ್ಲೆಲ್ಲಿದೆ ಮಾರುಕಟ್ಟೆ…: ರಾಜ್ಯಾದ್ಯಂತ ಇರುವ ಅಕ್ಕ ಕೆಫೆಗಳಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಸಂಜೀವಿನಿ ಮಾರಾಟ ಮಳಿಗೆಗಳು, ಸರ್ಕಾರಿ ಕಟ್ಟಡಗಳಲ್ಲಿರುವ ಮಾರಾಟ ಮಳಿಗೆಗಳಲ್ಲಿ, ಖಾಸಗಿ ಕಂಪನಿಗಳ ಮಾಲ್‌ಗಳಲ್ಲಿ, ಗ್ರಾ.ಪಂ, ತಾ.ಪಂ, ಜಿ.ಪಂ ಮಾಲಿಕತ್ವದ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.