Home Advertisement
Home ಆರೋಗ್ಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ನೋಡಿ ಮೋಸ ಹೋಗಬೇಡಿ; ಅಸಲಿಯೇ? ನಕಲಿಯೇ? ಹೀಗೆ ಚೆಕ್ ಮಾಡಿ!

ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ನೋಡಿ ಮೋಸ ಹೋಗಬೇಡಿ; ಅಸಲಿಯೇ? ನಕಲಿಯೇ? ಹೀಗೆ ಚೆಕ್ ಮಾಡಿ!

0
109

ಬೆಂಗಳೂರು: ಬೇಸಿಗೆ ಬಂದ್ರೆ ಸಾಕು ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಘಮಲು ಆವರಿಸುತ್ತದೆ. ಆದ್ರೆ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸುವ ಬದಲಿಗೆ, ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಮಾಗಿಸುತ್ತಿದ್ದಾರೆ. ಇಂತಹ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಆರೋಗ್ಯದ ಮೇಲೆ ವಿಷದ ಪರಿಣಾಮ: ಕೃತಕವಾಗಿ ಹಣ್ಣಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಅಥವಾ ಅಸಿಟಲೀನ್ ಅನಿಲವು ಅತ್ಯಂತ ಅಪಾಯಕಾರಿ. ಇವುಗಳ ಬಳಕೆಯಿಂದ ತಲೆನೋವು, ತಲೆತಿರುಗುವಿಕೆ, ವಾಂತಿ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಣ್ಣುಗಳನ್ನು ಮಾಗಿಸಲು ಕಾರ್ಬೈಡ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಎಥಿಲೀನ್ ಅನಿಲವನ್ನು ನಿಯಮಿತ ಪ್ರಮಾಣದಲ್ಲಿ ಬಳಸಲು ಮಾತ್ರ ಅನುಮತಿಯಿದೆ.

ಪತ್ತೆಹಚ್ಚುವುದು ಹೇಗೆ?: ನೀವು ಖರೀದಿಸುವ ಮಾವು ಸುರಕ್ಷಿತವೇ ಎಂದು ತಿಳಿಯಲು ಈ ಕೆಳಗಿನ ಅಂಶಗಳನ್ನು ಗಮನಿಸಿ:

ಬಣ್ಣದ ವ್ಯತ್ಯಾಸ: ನೈಸರ್ಗಿಕವಾಗಿ ಮಾಗಿದ ಹಣ್ಣು ಏಕರೂಪದ ಹಳದಿ ಬಣ್ಣವನ್ನು ಹೊಂದಿರುತ್ತದೆ. ರಾಸಾಯನಿಕ ಬಳಸಿದ ಹಣ್ಣುಗಳು ಅತಿ ಹೆಚ್ಚು ಪ್ರಕಾಶಮಾನವಾಗಿ ಅಥವಾ ಅಲ್ಲಲ್ಲಿ ಹಸಿರು ಮಚ್ಚೆಗಳೊಂದಿಗೆ ಅಸ್ವಾಭಾವಿಕವಾಗಿ ಕಾಣುತ್ತವೆ.

ಪರಿಮಳ: ನೈಸರ್ಗಿಕ ಮಾವಿನ ಹಣ್ಣಿನ ಸುವಾಸನೆ ವಿಶಿಷ್ಟವಾಗಿರುತ್ತದೆ. ಇದು ಬಹಳ ಹೊತ್ತು ಇರುತ್ತದೆ. ರಾಸಾಯನಿಕ ಮಿಶ್ರಿತ ಹಣ್ಣುಗಳಲ್ಲಿ ಯಾವುದೇ ಸುವಾಸನೆ ಬರುವುದಿಲ್ಲ. ಹಾಗೇ ಹಣ್ಣುಗಳು ವಿಚಿತ್ರವಾದ ವಾಸನೆ ಹೊಂದಿರುತ್ತವೆ.

ಸ್ಪರ್ಶ ಮತ್ತು ಮೃದುತ್ವ: ಮಾವಿನ ಹಣ್ಣನ್ನು ಜೋರಾಗಿ ಒತ್ತಿದಾಗ, ಅದು ನೈಸರ್ಗಿಕ ಹಣ್ಣು ಆಗಿದ್ದರೆ ಎಲ್ಲೂ ಅತಿಯಾಗಿ ಮೃದುವಾಗಿರುವುದಿಲ್ಲ. ಆದ್ರೆ ಕೆಮಿಕಲ್ ಹಾಕಿದ ಹಣ್ಣುಗಳು ಅತಿಯಾದ ಮೆತ್ತಗಿನ ಗುಣ ಲಕ್ಷಣ ಹೊಂದಿರುತ್ತವೆ.

ಬಾಹ್ಯ ಲಕ್ಷಣ: ಹಣ್ಣಿನ ಮೇಲೆ ಅತಿಯಾದ ಕಪ್ಪು ಕಲೆಗಳು ಅಥವಾ ಚುಚ್ಚುಮದ್ದಿನ ಗುರುತುಗಳಿದ್ದರೆ ಅಂತಹ ಹಣ್ಣುಗಳಿಂದ ದೂರ ಇರುವುದು ಒಳ್ಳೆಯದ್ದು.

ಒಟ್ಟಾರೆ.. ಗ್ರಾಹಕರು ಹಣ್ಣುಗಳನ್ನು ಖರೀದಿಸಿದ ತಕ್ಷಣ ಬಳಸದೆ, ಅಡುಗೆ ಸೋಡಾ ಬೆರೆಸಿದ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಸಬೇಕು. ನಂಬಿಕಸ್ಥ ವ್ಯಾಪಾರಿಗಳಿಂದ ಮಾತ್ರ ಹಣ್ಣುಗಳನ್ನು ಖರೀದಿಸುವ ಮೂಲಕ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗೇ ಯಾವುದೇ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ನಿಗಾವಹಿಸಿ ಕೊಂಡುಕೊಳ್ಳಿ.