Home Advertisement
Home ಸುದ್ದಿ ದೇಶ ಸಮಾಜಕ್ಕೆ ಪಾಠ ಹೇಳಿದ ತಂದೆ; ವಿಚ್ಛೇದಿತ ಮಗಳಿಗಾಗಿ ಸಂಭ್ರಮಿಸಿದ ನಿವೃತ್ತ ನ್ಯಾಯಾಧೀಶ!

ಸಮಾಜಕ್ಕೆ ಪಾಠ ಹೇಳಿದ ತಂದೆ; ವಿಚ್ಛೇದಿತ ಮಗಳಿಗಾಗಿ ಸಂಭ್ರಮಿಸಿದ ನಿವೃತ್ತ ನ್ಯಾಯಾಧೀಶ!

0
30

ವಿಚ್ಛೇದನ ಈ ಪದ ಕೇಳಿದಾಗಲೂ ನಮ್ಮ ಸಮಾಜದಲ್ಲಿ ಹಲವರ ಮುಖದಲ್ಲಿ ಅಸಮಾಧಾನ ಮೂಡುತ್ತದೆ. ಇದನ್ನು ಇನ್ನೂ ಒಂದು ಕಳಂಕವೆಂದು ನೋಡಲಾಗುತ್ತದೆ. ಆದರೆ, ಕೆಲವರು ಈ ಕಲ್ಪನೆಯನ್ನು ಬದಲಾಯಿಸಲು ಧೈರ್ಯವಾಗಿ ಮುಂದೆ ಬರುತ್ತಾರೆ.

ಪ್ರಣಿತಾ ವಸಿಷ್ಠ ಅವರ ಜೀವನವೂ ಇದೇ ರೀತಿಯ ಒಂದು ಕಥೆ. 2018ರಲ್ಲಿ ಅವರು ಭಾರತೀಯ ಸೇನೆಯ ಮೇಜರ್ ಒಬ್ಬರನ್ನು ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸುಖಕರವಾಗಿದ್ದರೂ, ಕಾಲಕ್ರಮೇಣ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗತೊಡಗಿದವು. ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಒತ್ತಡಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಮಗು ಜನಿಸಿದ ನಂತರವೂ ಆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಬದಲಾಗಿ, ಅವರ ನೋವು ಇನ್ನಷ್ಟು ಗಾಢವಾಯಿತು.

ಕೊನೆಗೆ, ತಮ್ಮ ಗೌರವ ಮತ್ತು ಮನಶಾಂತಿಯಿಗಾಗಿ ಪ್ರಣಿತಾ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡರು. ಅವರು ಮೇರಠ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಇದು ಸುಲಭವಾದ ನಿರ್ಧಾರವಾಗಿರಲಿಲ್ಲ, ಆದರೆ ಅವರ ಆತ್ಮಗೌರವಕ್ಕಾಗಿ ಅದು ಅವಶ್ಯವಾಗಿತ್ತು.

ವಿಚ್ಛೇದನ ಪಡೆದ ನಂತರ ಮನೆಗೆ ಮರಳಿದ ಪ್ರಣಿತಾಳಿಗೆ ಕಾದಿದ್ದದ್ದು ದುಃಖವಲ್ಲ, ಅದ್ಭುತವಾದ ಸ್ವಾಗತ. ಅವರ ಕುಟುಂಬದವರು ಡಿಜೆ, ಡೋಲು ಮತ್ತು ನೃತ್ಯದೊಂದಿಗೆ ಸಂಭ್ರಮದಿಂದ ಆಕೆಯನ್ನು ಮನೆಗೆ ಕರೆತಂದರು. ತಂದೆ ಜ್ಞಾನೇಂದ್ರ ಕುಮಾರ್ ಅವರು ಹೂವಿನ ಹಾರ ಹಾಕಿ, ಸಿಹಿ ಹಂಚಿ, ತನ್ನ ಮಗಳನ್ನು ಗೌರವದಿಂದ ಸ್ವಾಗತಿಸಿದರು.

“ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ,” ಎಂದು ಹೇಳಿದ ಅವರು, “ಆಕೆಯ ವೈವಾಹಿಕ ಜೀವನ ಸುಖಕರವಾಗಿರದಿದ್ದರೆ, ಆಕೆಯನ್ನು ಆ ಪರಿಸ್ಥಿತಿಯಿಂದ ಹೊರತೆಗೆದು ತರುವುದು ನನ್ನ ಕರ್ತವ್ಯ. ಹೆಣ್ಣುಮಕ್ಕಳು ಆಸ್ತಿಯಲ್ಲ. ಅವರ ಖುಷಿ ಮತ್ತು ಗೌರವವೇ ಮುಖ್ಯ,” ಎಂದು ಸ್ಪಷ್ಟವಾಗಿ ಹೇಳಿದರು.

ಈ ಘಟನೆಯು ಕೇವಲ ಒಂದು ಕುಟುಂಬದ ಕಥೆಯಲ್ಲ. ಇದು ಸಮಾಜಕ್ಕೆ ನೀಡಿದ ಒಂದು ಬಲವಾದ ಸಂದೇಶ. ವಿಚ್ಛೇದನವೆಂಬುದು ಕಳಂಕವಲ್ಲ, ಅದು ಒಬ್ಬರ ಜೀವನದಲ್ಲಿ ಹೊಸ ಆರಂಭವಾಗಬಹುದು. ಹೆಣ್ಣುಮಕ್ಕಳ ಸಂತೋಷ ಮತ್ತು ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ಕಾಲ ಬಂದಿದೆ.