ದೇಶೀಯ ಸರಣಿಗಳಲ್ಲಿ ಆಡಲು ರೋಹಿತ್, ಕೊಹ್ಲಿಗೆ ಸೂಚನೆ

0
17

ಮುಂಬೈ: ಟೀಮ್ ಇಂಡಿಯಾದಲ್ಲಿ ಸದ್ಯ ಏಕದಿನ ಕ್ರಿಕೆಟ್‌ನಲ್ಲಷ್ಟೇ ಉಳಿದುಕೊಂಡಿರುವ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬಿಸಿಸಿಐ ಸೂಚನೆ ನೀಡಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲೇಬೇಕಿದೆ. ಈ ಇಬ್ಬರ ಏಕದಿನ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಸಾಕಷ್ಟು ಊಹಪೋಹಗಳು ಹೆಚ್ಚಾಗುತ್ತಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಅನುಭವಿ ಜೋಡಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸಬೇಕಾದರೆ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ವರದಿಗಳಾಗಿವೆ.

ಅಂತಾರಾಷ್ಟ್ರೀಯ ಟೆಸ್ಟ್, ಟಿ20ಗಳಿಂದ ಹೊರಬಂದ ಬಳಿಕ ರೋಹಿತ್ ಮತ್ತು ಕೊಹ್ಲಿ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯ ಕ್ರಿಕೆಟಿಗರಾಗಿ ಉಳಿದಿದ್ದಾರೆ. ಆದ್ದರಿಂದ, ಆಯ್ಕೆಗಾಗಿ ಅವರ ಪಂದ್ಯದ ಫಿಟ್‌ನೆಸ್ ದೊಡ್ಡ ಚರ್ಚೆಯ ವಿಷಯವಾಗಿದೆ. ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ತಂಡದ ಆಯ್ಕೆಗೂ ಮುನ್ನ, ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ಜೋಡಿ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಭಾರತ ಪರ ಆಡಲು ಬಯಸಿದರೆ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ಮಂಡಳಿ ಮತ್ತು ತಂಡದ ಆಡಳಿತ ಮಂಡಳಿ ಇಬ್ಬರಿಗೂ ತಿಳಿಸಿದೆ. ಇಬ್ಬರೂ ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ, ಅವರು ಫಿಟ್ ಆಗಲು ದೇಶೀಯ ಕ್ರಿಕೆಟ್ ಆಡಲೇಬೇಕು” ಎಂದು ಬಿಸಿಸಿಐ ಮೂಲಗಳು ಖಾಸಗಿ ಮಾಧ್ಯಮಗಳಿಗೆ ತಿಳಿಸಿವೆ ಎನ್ನಲಾಗಿದೆ.

ರಣಜಿ ಆಡಿದ್ದ ರೋಹಿತ್, ವಿರಾಟ್ ಕೊಹ್ಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ – ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಕಳಪೆ ಪ್ರದರ್ಶನದ ನಂತರ ಬಿಸಿಸಿಐ ಇದೇ ರೀತಿಯ ನಿರ್ದೇಶನವನ್ನು ಹೊರಡಿಸಿದಾಗ, ಕೊಹ್ಲಿ ಮತ್ತು ರೋಹಿತ್ ಇಬ್ಬರೂ ರಣಜಿ ಟ್ರೋಫಿ ಆಡಲು ಮರಳಿದ್ದರು, ತಲಾ ಒಂದು ಪಂದ್ಯದಲ್ಲಿ ಆಡಿದ್ದರು. ಇಂಗ್ಲೆಂಡ್ ಪ್ರವಾಸಕ್ಕೆ ತಂಡ ಆಯ್ಕೆಗೆ ಮುಂಚಿತವಾಗಿ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದರಾದರೂ, ಭಾರತದ 2027 ರ ಏಕದಿನ ವಿಶ್ವಕಪ್ ತಂಡದಲ್ಲಿ ಆಯ್ಕೆಗಾಗಿ ಹೋರಾಡಬೇಕಾದರೆ ಅವರಿಂದ ಇದೇ ರೀತಿಯ ಲಭ್ಯತೆಯನ್ನು ಕೋರಲಾಗಿದೆ.

ಕಳೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಬಳಿಕ ಈ ಇಬ್ಬರೂ ವಿಶ್ರಾಂತಿಯಲ್ಲಿದ್ದು, ನವೆಂಬರ್ 26 ರಂದು ಪ್ರಾರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ತಂಡಕ್ಕಾಗಿ ಆಡಲು ಸಹ ಅವರು ಲಭ್ಯವಿರಬಹುದು ಎಂದು ಅಂದಾಜಿಸಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಆಟಗಾರರು ದೇಶೀಯ ಕ್ರಿಕೆಟ್ ಆಡುವುದು ಪ್ರಮುಖ ಎಂದು ತಿಳಿಸಿದ್ದರು.

ಡಿಸೆಂಬರ್ 24ರಿಂದ ವಿಜಯ್ ಹಜಾರೆ: ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿ ಡಿ. 6ರಂದು ಸರಣಿ ಅಂತ್ಯವಾಗಲಿದೆ. ಇದಾದ ಬಳಿಕ ಡಿಸೆಂಬರ್ 24ರಿಂದ ವಿಜಯ್ ಹಜಾರೆ ಟ್ರೋಫಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಈ ಇಬ್ಬರೂ ಮತ್ಯಾವುದೇ ದೇಶಿ ಟೂರ್ನಿಗಳಲ್ಲಿ ಈ ಇಬ್ಬರೂ ಕಾಣಿಸಿಕೊಳ್ಳುವುದು ಅನುಮಾನವಾಗಿದ್ದು, ವಿರಾಟ್ ತಮ್ಮ ನಿರ್ಧಾರ ತಿಳಿಸಬೇಕಿದೆ.

ರೋಹಿತ್ ಆಟ ಪಕ್ಕಾ: ಬಿಸಿಸಿಐನ ಈ ಸೂಚನೆಗೆ ಹಿಟ್‌ಮ್ಯಾನ್ ರೋಹಿತ್ ಈಗಾಗಲೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಲಭ್ಯವಿರುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಕೊಹ್ಲಿ ದೇಶೀಯ ಏಕದಿನ ಪಂದ್ಯಾವಳಿಗೆ ತಮ್ಮ ಲಭ್ಯತೆಯ ಸ್ಥಿತಿಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

Previous articleರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು ಎಂ.ಬಿ. ಪಾಟೀಲ ಶಿಫಾರಸು
Next articleಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

LEAVE A REPLY

Please enter your comment!
Please enter your name here