RCB ಇನ್ನು ಕನ್ನಡಿಗರ ಸ್ವತ್ತು? 17 ಸಾವಿರ ಕೋಟಿಯ ರೇಸ್‌ಗೆ ‘ಕಾಂತಾರ’ ನಿರ್ಮಾಪಕರ ದಿಢೀರ್ ಎಂಟ್ರಿ!

0
21

RCB : 17 ವರ್ಷಗಳ ವನವಾಸವನ್ನು ಕೊನೆಗೊಳಿಸಿ, 2025ರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮದ ಬೆನ್ನಲ್ಲೇ, ತಂಡದ ಮಾಲೀಕತ್ವ ಬದಲಾವಣೆಯ ಸುದ್ದಿ ಇದೀಗ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ವಿಜಯೋತ್ಸವದ ದುರಂತದ ನಂತರ, ತಂಡದ ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಇಂಡಿಯಾ, 2026ರ ಐಪಿಎಲ್‌ಗೆ ಮುನ್ನ ತಂಡವನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ‘ಹಾಟ್ ಕೇಕ್’ ತಂಡವನ್ನು ಖರೀದಿಸಲು ದೇಶದ ಘಟಾನುಘಟಿ ಉದ್ಯಮಿಗಳು ರೇಸ್‌ನಲ್ಲಿರುವಾಗಲೇ, ಇದೀಗ ಕರ್ನಾಟಕದ ಹೆಮ್ಮೆಯ ಸಂಸ್ಥೆಯೊಂದು ಈ ರೇಸ್‌ಗೆ ಎಂಟ್ರಿ ಕೊಟ್ಟಿದೆ.

ಖರೀದಿ ರೇಸ್‌ನಲ್ಲಿ ಘಟಾನುಘಟಿಗಳು: ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿಯನ್ನು ತಮ್ಮದಾಗಿಸಿಕೊಳ್ಳಲು ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಜಿರೋಧಾದ ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಅದಾನಿ ಗ್ರೂಪ್, ಜೆಎಸ್‌ಡಬ್ಲ್ಯೂ ಗ್ರೂಪ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಅವರಂತಹ ದೊಡ್ಡ ಹೆಸರುಗಳು ಈಗಾಗಲೇ ರೇಸ್‌ನಲ್ಲಿವೆ.

ಇದಕ್ಕೆ ಕಾರಣ, ಚಾಂಪಿಯನ್ ಪಟ್ಟಕ್ಕೇರಿದ ನಂತರ ಆರ್‌ಸಿಬಿಯ ಬ್ರ್ಯಾಂಡ್ ಮೌಲ್ಯ ಗಗನಕ್ಕೇರಿದ್ದು, ಸದ್ಯಕ್ಕೆ ಸುಮಾರು 2 ಬಿಲಿಯನ್ ಡಾಲರ್, ಅಂದರೆ 17,732 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕನ್ನಡಿಗರದ್ದೇ ಆಗಲಿದೆಯೇ ಆರ್‌ಸಿಬಿ?: ಈ ಎಲ್ಲಾ ದಿಗ್ಗಜರ ನಡುವೆ, ಇದೀಗ ಆರ್‌ಸಿಬಿ ಮಾಲೀಕತ್ವದ ರೇಸ್‌ಗೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಪ್ರವೇಶಿಸಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿ, ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೊಂಬಾಳೆ ಫಿಲ್ಮ್ಸ್, ಇದೀಗ ಕ್ರೀಡಾ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಆರ್‌ಸಿಬಿಯ ಡಿಜಿಟಲ್ ಪಾಲುದಾರರಾಗಿಯೂ ಕಾರ್ಯನಿರ್ವಹಿಸಿದ್ದ ಹೊಂಬಾಳೆ ಸಂಸ್ಥೆಯು, ತಂಡದ ಸಹ-ಮಾಲೀಕತ್ವವನ್ನು ಪಡೆಯಬಹುದು ಅಥವಾ ಸಂಪೂರ್ಣವಾಗಿ ಖರೀದಿಸಲೂ ಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಸಾಧ್ಯವಾದರೆ, ಆರ್‌ಸಿಬಿ ತಂಡವು ಸಂಪೂರ್ಣವಾಗಿ ಕನ್ನಡಿಗರ ಸ್ವತ್ತು ಆಗಲಿದ್ದು, ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಸಂತಸದ ವಿಷಯ ಮತ್ತೊಂದಿರಲಾರದು. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ನಿಂದಾಗಲೀ, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನಿಂದಾಗಲೀ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ತಂಡದ ಹೆಸರು ಬದಲಾಗಲಿದೆಯೇ?: ಇಷ್ಟಂತೂ ಸತ್ಯ, 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಹೊಸ ಮಾಲೀಕರೊಂದಿಗೆ, ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ. ಆದರೆ, ಆ ಹೊಸ ಮಾಲೀಕರು ಯಾರು? ಅವರು ಕನ್ನಡಿಗರೇ ಆಗಿರುತ್ತಾರೆಯೇ? ಮತ್ತು, ಹೊಸ ಮಾಲೀಕರು ಬಂದ ನಂತರ, ತಂಡದ “ರಾಯಲ್ ಚಾಲೆಂಜರ್ಸ್ ಬೆಂಗಳೂರು” ಎಂಬ ಐಕಾನಿಕ್ ಹೆಸರು ಬದಲಾಗಲಿದೆಯೇ? ಎಂಬ ಪ್ರಶ್ನೆಗಳು ಇದೀಗ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳನ್ನು ಕಾಡುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ.

Previous articleBihar Election: ಐವರು ಮಾಜಿ IPS ಅಧಿಕಾರಿಗಳಲ್ಲಿ ಮತದಾರ ಮೆಚ್ಚಿದ್ದು ಒಬ್ಬರನ್ನೇ!
Next articleಧಾರವಾಡ: ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ಮುಂದುವರಿಕೆ

LEAVE A REPLY

Please enter your comment!
Please enter your name here