Home Advertisement
Home ಕ್ರೀಡೆ CSKಗೆ ಜಡೇಜಾ ಖಡಕ್ ತಿರುಗೇಟು: ಒಂದೇ ಓವರ್‌ನಲ್ಲಿ 2 ವಿಕೆಟ್ ಉಡೀಸ್!

CSKಗೆ ಜಡೇಜಾ ಖಡಕ್ ತಿರುಗೇಟು: ಒಂದೇ ಓವರ್‌ನಲ್ಲಿ 2 ವಿಕೆಟ್ ಉಡೀಸ್!

0
9

ಐಪಿಎಲ್ 2026ರ ಟೂರ್ನಿಯಲ್ಲಿ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ! ಸತತ 12 ಆವೃತ್ತಿಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆಧಾರಸ್ತಂಭವಾಗಿದ್ದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಇದೀಗ ತಮ್ಮ ಹಳೆಯ ಫ್ರಾಂಚೈಸಿಗೆ ಸರಿಯಾದ ಸೇಡು ತೀರಿಸಿಕೊಂಡಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್ (RR) ಪರ ಕಣಕ್ಕಿಳಿದಿರುವ ಜಡೇಜಾ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 2 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಏನಿದು ಟ್ರೇಡ್‌ ಹಿಂದಿನ ಕಥೆ?: 2012ರಿಂದ ಸಿಎಸ್‌ಕೆ ಜೊತೆಗಿದ್ದ ಜಡೇಜಾ, ತಂಡಕ್ಕೆ ಮೂರು ಬಾರಿ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈ ಬಾರಿಯ ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ಮ್ಯಾನೇಜ್ಮೆಂಟ್ ಅಚ್ಚರಿಯ ನಿರ್ಧಾರ ಕೈಗೊಂಡು, ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ‘ಟ್ರೇಡ್’ ಮಾಡಿತ್ತು.

ಬದಲಾಗಿ ಆರ್‌ಆರ್‌ನಲ್ಲಿದ್ದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆಳೆದುಕೊಂಡಿತ್ತು. ತಂಡಕ್ಕಾಗಿ ಅಷ್ಟು ಬೆವರು ಹರಿಸಿದರೂ ತನ್ನನ್ನು ಕೈಬಿಟ್ಟರಲ್ಲ ಎಂಬ ಬೇಸರದಲ್ಲಿದ್ದ ಜಡೇಜಾ, ಇದೀಗ ಮೈದಾನದಲ್ಲೇ ಬೌಲಿಂಗ್ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

ಒಂದೇ ಓವರ್‌ನಲ್ಲಿ ಡಬಲ್ ಧಮಾಕಾ!: ಸಿಎಸ್‌ಕೆ ಇನ್ನಿಂಗ್ಸ್‌ನ 8ನೇ ಓವರ್ ಬೌಲ್ ಮಾಡಲು ಬಂದ ಜಡೇಜಾ, ತಮ್ಮ ಮೊದಲ ಓವರ್‌ನಲ್ಲೇ ಕಮಾಲ್ ಮಾಡಿದರು. ಓವರ್‌ನ 2ನೇ ಎಸೆತದಲ್ಲೇ ಅಪಾಯಕಾರಿ ಸರ್ಫರಾಜ್ ಖಾನ್ ಅವರನ್ನು ಎಲ್‌ಬಿಡಬ್ಲ್ಯೂ (LBW) ಬಲೆಗೆ ಬೀಳಿಸಿದರು. ಆ ಬಳಿಕ ಕ್ರೀಸ್‌ಗೆ ಬಂದ ಪವರ್ ಹಿಟ್ಟರ್ ಶಿವಂ ದುಬೆ, ಜಡೇಜಾ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. ಆದರೆ ಎದೆಗುಂದದ ‘ಸರ್ ಜಡೇಜಾ’, ಮತ್ತದೇ ಸಿಕ್ಸರ್‌ಗೆ ಯತ್ನಿಸಿದ ದುಬೆ ಅವರನ್ನು ಕ್ಯಾಚ್ ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು.

ವಿಶೇಷವೆಂದರೆ, ಜಡೇಜಾ 2008ರಲ್ಲಿ ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಮತ್ತೆ ತಮ್ಮ ಮಾತೃ ತಂಡಕ್ಕೆ ಮರಳಿರುವುದು ಅವರಿಗೆ ಆನೆಬಲ ತಂದಿದೆ. ಸಿಎಸ್‌ಕೆ ಮ್ಯಾನೇಜ್ಮೆಂಟ್ ಈಗ ಈ ಅದ್ಭುತ ಆಟಗಾರನನ್ನು ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿರಬಹುದು.