ವಿಶ್ವಕಪ್ ಗೆದ್ದ ಅಂಗಳದಲ್ಲೇ ಮಂಡಿಯೂರಿ ಪ್ರೇಮ ನಿವೇದನೆ: ಕಣ್ಣೀರಾದ ಸ್ಮೃತಿ ಮಂದಾನ, ಮದುವೆ ದಿನಾಂಕ ಫಿಕ್ಸ್!

0
13

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಮತ್ತು ಆರ್​​ಸಿಬಿ ನಾಯಕಿ ಸ್ಮೃತಿ ಮಂದಾನ ಬದುಕಿನ ಹೊಸ ಇನ್ನಿಂಗ್ಸ್‌ಗೆ ಮುಹೂರ್ತ ನಿಗದಿಯಾಗಿದೆ. ತಮ್ಮ ಬಹುಕಾಲದ ಗೆಳೆಯ, ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್ ಅವರೊಂದಿಗೆ ಸ್ಮೃತಿ ನವೆಂಬರ್ 23 ರಂದು ಸಪ್ತಪದಿ ತುಳಿಯಲಿದ್ದಾರೆ.

ಮದುವೆಯ ಸಂಭ್ರಮದ ನಡುವೆಯೇ, ಪಲಾಶ್ ಸ್ಮೃತಿಗೆ ಕ್ರೀಡಾಂಗಣದ ಮಧ್ಯೆಯೇ ಸಿನಿಮೀಯ ಶೈಲಿಯಲ್ಲಿ ಪ್ರಪೋಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದೇನು?: ಭಾರತ ಮಹಿಳಾ ತಂಡ ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವೇ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಯಿತು.

ಪಲಾಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸ್ಮೃತಿ ಮಂದಾನ ಕಣ್ಣಿಗೆ ಬಟ್ಟೆ ಕಟ್ಟಿ ಮೈದಾನದ ಮಧ್ಯಭಾಗಕ್ಕೆ ಕರೆತರುತ್ತಾರೆ. ಕಪ್ಪು ಸೂಟ್‌ನಲ್ಲಿ ಪಲಾಶ್ ಮಿಂಚುತ್ತಿದ್ದರೆ, ಸ್ಮೃತಿ ಕೆಂಪು ಬಣ್ಣದ ಗೌನ್‌ನಲ್ಲಿ ಕಂಗೊಳಿಸುತ್ತಿದ್ದರು.

ಸ್ಮೃತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದಾಗ, ಅವರ ಮುಂದಿನ ದೃಶ್ಯ ನೋಡಿ ಒಂದು ಕ್ಷಣ ಅವಕ್ಕಾದರು. ಪಲಾಶ್ ಮಂಡಿಯೂರಿ, ಕೈಯ್ಯಲ್ಲಿ ಗುಲಾಬಿ ಹೂಗುಚ್ಛ ಮತ್ತು ವಜ್ರದ ಉಂಗುರವನ್ನು ಹಿಡಿದು ಪ್ರೇಮ ನಿವೇದನೆ ಮಾಡಿದರು.

ಈ ಅನಿರೀಕ್ಷಿತ ಕ್ಷಣಕ್ಕೆ ಸ್ಮೃತಿ ಮಂದಾನ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು. ಬಳಿಕ ಭಾವಪರವಶರಾಗಿ ಪಲಾಶ್ ಅವರನ್ನು ಅಪ್ಪಿಕೊಂಡು ತಮ್ಮ ಒಪ್ಪಿಗೆ ಸೂಚಿಸಿದರು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ಇಬ್ಬರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನವಜೋಡಿಗೆ ಶುಭ ಹಾರೈಸಿದರು.

ಆರು ವರ್ಷಗಳ ಪ್ರೇಮಕ್ಕೆ ಅಧಿಕೃತ ಮುದ್ರೆ: ಸ್ಮೃತಿ ಮತ್ತು ಪಲಾಶ್ 2019 ರಿಂದಲೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಇಬ್ಬರೂ ತಮ್ಮ ಸಂಬಂಧವನ್ನು ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ಭಾರತ ತಂಡ ವಿಶ್ವಕಪ್ ಗೆದ್ದಾಗ, ಸಂಭ್ರಮಾಚರಣೆಯ ವೇಳೆ ಪಲಾಶ್ ಮೈದಾನದಲ್ಲಿ ಸ್ಮೃತಿ ಜೊತೆ ಕಾಣಿಸಿಕೊಂಡಿದ್ದರು.

ಇದು ಅವರ ಸಂಬಂಧದ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿತ್ತು. ಅಕ್ಟೋಬರ್ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಲಾಶ್, “ಸ್ಮೃತಿ ಶೀಘ್ರದಲ್ಲೇ ಇಂದೋರ್‌ನ ಸೊಸೆಯಾಗಲಿದ್ದಾರೆ” ಎಂದು ಹೇಳುವ ಮೂಲಕ ಮದುವೆಯ ಸುಳಿವು ನೀಡಿದ್ದರು.

ಮದುವೆಯ ಸಂಭ್ರಮ ಈಗಾಗಲೇ ಮನೆಮಾಡಿದ್ದು, ಸಂಗೀತ ಕಾರ್ಯಕ್ರಮದ ತಯಾರಿ ಜೋರಾಗಿ ನಡೆದಿದೆ. ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಸೇರಿದಂತೆ ಹಲವರು ‘ಮುನ್ನಾ ಭಾಯ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಸ್ಮೃತಿ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಪ್ರದರ್ಶಿಸಿದ್ದಾರೆ.

Previous articleMovie Review: ಚೆಲುವೆಯರ ಮಧ್ಯೆ – ಬಡಪಾಯಿ ಬ್ರದರ್
Next articleಸಾಲಬಾಧೆ ಶಂಕೆ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

LEAVE A REPLY

Please enter your comment!
Please enter your name here