ರಾಷ್ಟ್ರೀಯ ಕಾರ್ಟಿಂಗ್‌: ಬೆಂಗಳೂರಿನಇಶಾನ್‌ ಮಾದೇಶ್‌ಗೆ ಗೆಲುವು

0
1

ಬೆಂಗಳೂರು: ಮಿಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ನ 5 ಹಾಗೂ 6ನೇ ಸುತ್ತು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು. ಬೆಂಗಳೂರಿನವರೇ ಆದ ಇಶಾನ್‌ ಮಾದೇಶ್‌ ಹಿರಿಯರ ವಿಭಾಗದಲ್ಲಿ ಅಮೋಘ ಗೆಲುವು ಸಾಧಿಸಿದರು.

ಇನ್ನು, ಮುಂಬೈನ ಕಿಯಾನ್‌ ಶಾ (ರಾಯೊ ರೇಸಿಂಗ್‌) ಕಿರಿಯರ ವಿಭಾಗದಲ್ಲಿ ಅಮೋಘ ಪ್ರದರ್ಶನ ತೋರಿ ಗಮನ ಸೆಳೆದರು. ರಾಯೊ ರೇಸಿಂಗ್‌ ತಂಡವನ್ನು ಪ್ರತಿನಿಧಿಸುವ, ಮುಂಬೈನವರೇ ಆದ ಕೃಷ್ ಗುಪ್ತಾ ಆಕರ್ಷಕ ಪ್ರದರ್ಶನದೊಂದಿಗೆ ಹಿರಿಯರ
ವಿಭಾಗದ ಕೊನೆ 2 ಸುತ್ತುಗಳಲ್ಲಿ ಕ್ರಮವಾಗಿ 3 ಹಾಗೂ 2ನೇ ಸ್ಥಾನ ಗಳಿಸಿದರು.

  • ಬೆಂಗಳೂರಲ್ಲಿ ರಾಷ್ಟ್ರೀಯ ಕಾರ್ಟಿಂಗ್‌ನ ಕೊನೆ 2 ಸುತ್ತು ಯಶಸ್ವಿ ಮುಕ್ತಾಯ
  • ಕಿರಿಯರ ವಿಭಾಗದಲ್ಲಿ ಕಿಯಾನ್‌ ಶಾ, ಹಿರಿಯರ ವಿಭಾಗದಲ್ಲಿ ಕೃಷ್‌ ಗುಪ್ತಾಗೆ 2ನೇ ಸ್ಥಾನ

ಈ ಫಲಿತಾಂಶಗಳ ಸಹಾಯದಿಂದ ಕಿಯಾನ್‌ ಹಾಗೂ ಕೃಷ್‌ ಇಬ್ಬರೂ, ತಮ್ಮ ತಮ್ಮ ವಿಭಾಗಗಳಲ್ಲಿ ಒಟ್ಟಾರೆ 2ನೇ ಸ್ಥಾನ ಗಳಿಸಿ ಸಂಭ್ರಮಿಸಿದರು.

5 ಹಾಗೂ 6ನೇ ಸುತ್ತುಗಳನ್ನು ಒಟ್ಟಿಗೆ ನಡೆಸಿದ ಕಾರಣ, ರೇಸರ್‌ಗಳ ಫಿಟ್ನೆಸ್‌ ಹಾಗೂ ಮಾನಸಿಕ ಸದೃಢತೆ ತೀವ್ರ ಪರೀಕ್ಷೆಗೆ ಒಳಪಟ್ಟಿತು. ಕಿರಿಯರ ವಿಭಾಗದ ಅರ್ಹತಾ ಸುತ್ತು, ಕಿಯಾನ್‌ ಪಾಲಿಗೆ ನಿರೀಕ್ಷಿತ ಫಲಿತಾಂಶ ತಂದುಕೊಡಲಿಲ್ಲ. ಪೋಲ್‌ ಪೊಸಿಷನ್‌ ಪಡೆದ ಚೆನ್ನೈನ ಶಿವನ್ ಕಾರ್ತಿಕ್‌ಗಿಂತ 0.352 ಸೆಕೆಂಡ್‌ ಹಿಂದೆ ಉಳಿದ ಕಿಯಾನ್‌, 5ನೇ ಸ್ಥಾನ ತೃಪ್ತಿಪಟ್ಟರು.

5ನೇ ಸ್ಥಾನದೊಂದಿಗೆ ರೇಸ್‌ ಆರಂಭಿಸಿದರೂ, ಕಿಯಾನ್‌ ಧೃತಿಗೆಡಲಿಲ್ಲ. ಬಹಳ ಬೇಗನೆ 2ನೇ ಸ್ಥಾನಕ್ಕೆತಲುಪಿದ ಅವರು, 1.45 ಸೆಕೆಂಡ್‌ಗಳಲ್ಲಿ ಕಾರ್ತಿಕ್‌ಗೆ ಮೊದಲ ಸ್ಥಾನ ಬಿಟ್ಟುಕೊಟ್ಟು 2ನೇ ಸ್ಥಾನ ಪಡೆದರು. ಪ್ರಿ-ಫೈನಲ್‌ನಲ್ಲಿ ಕಿಯಾನ್‌ 2ನೇ ಸ್ಥಾನದಲ್ಲಿ ರೇಸ್‌ ಆರಂಭಿಸಿ, 2ನೇ ಸ್ಥಾನದಲ್ಲೇ ರೇಸ್‌ ಮುಕ್ತಾಯಗೊಳಿಸಿದರು.

ಫೈನಲ್‌ನಲ್ಲಿ ಕಿಯಾನ್‌ ಉತ್ತಮ ಆರಂಭ ಪಡೆದರು. ಆರಂಭದಲ್ಲೇ ಮೊದಲ ಸ್ಥಾನ ಪಡೆದರು. ಆದರೆ, ಪುಣೆಯ ಕ್ರೆಸ್ಟ್‌ ಮೋಟಾರ್‌ಸ್ಪೋರ್ಟ್‌ನ ಅರಾಫತ್‌ ಶೇಖ್‌ರಿಂದ ಪ್ರಬಲ ಪೈಪೋಟಿ ಎದುರಾಯಿತು. ರೇಸ್‌ ಸಾಗಿದಂತೆ ಅಗ್ರಸ್ಥಾನಕ್ಕಾಗಿ ಐವರು ರೇಸರ್‌ಗಳ ನಡುವೆ ಮೆಗಾ ಪೈಪೋಟಿ ಶುರುವಾಯಿತು. ಕೊನೆಗೆ ಕಿಯಾನ್‌ ತಮ್ಮ ತಾಳ್ಮೆ ಕಾಪಾಡಿಕೊಂಡು ಚೆನ್ನೈನ ಎಶಾಂತ್‌ ವೆಂಕಟೇಶನ್‌ (ಎಂಸ್ಪೋರ್ಟ್‌)ರನ್ನು ಹಿಂದಿಕ್ಕಿ ಜಯಿಸಿದರು.

ಹಿರಿಯರ ವಿಭಾಗದಲ್ಲಿ 5ನೇ ಸುತ್ತಿನ ಅರ್ಹತಾ ರೇಸ್‌ನಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ (ಪೆರಿಗ್ರೈನ್ ರೇಸಿಂಗ್‌) ಪೋಲ್‌ ಪೊಸಿಷನ್‌ ಪಡೆದರು. ಕೃಷ್‌ ಗುಪ್ತಾ 0.216 ಸೆಕೆಂಡ್‌ ಹಿನ್ನಡೆಯೊಂದಿಗೆ 2ನೇ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿದ ಕಿಯಾನ್ ಶಾ ಕೇವಲ 0.055 ಸೆಕೆಂಡ್‌ ಹಿನ್ನಡೆಯೊಂದಿಗೆ 3ನೇ ಸ್ಥಾನಿಯಾದರು.

ಹೀಟ್‌ 1ರಲ್ಲಿ ಮಾದೇಶ್ ಸುಲಭವಾಗಿ ಗೆದ್ದರು. ಪುಣೆಯ ಅರಾಫತ್‌ ಶೇಖ್‌ ಹಾಗೂ ಗುರುಗ್ರಾಮದ ಆರವ್‌ ದೆವಾನ್ (ಲೀಫ್‌ಫ್ರಾಗ್‌ ರೇಸಿಂಗ್‌)ರನ್ನು ಹಿಂದಿಕ್ಕಿದರು. ಪ್ರಿ ಫೈನಲ್‌ನಲ್ಲೂ ಮಾದೇಶ್‌ ಗೆಲುವು ಸಾಧಿಸಿದರು.

ಹಿರಿಯರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರಿನ ಮಾದೇಶ್‌ ಮೊದಲ ಸ್ಥಾನಿಯಾದರೆ, ದೆವಾನ್‌ ಹಾಗೂ ಕೃಷ್‌ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ಕಿಯಾನ್‌ ಶಾ ಮುಂದಿನ ವಾರಾಂತ್ಯದಲ್ಲಿ ಎಫ್‌ಐಎ ಕಾರ್ಟಿಂಗ್‌ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕೂಟವು ನ.15-16ರಂದು ಮಲೇಷ್ಯಾದಲ್ಲಿ ನಡೆಯಲಿದೆ.

Previous articleಮುಂದವರಿದ ಕಬ್ಬು ಬೆಳೆಗಾರರ ಹೋರಾಟ: ಕಾರ್ಖಾನೆ ಪ್ರತಿನಿಧಿಗಳ ತುರ್ತು ಸಭೆ ನಡೆಸಿದ ಡಿಸಿ

LEAVE A REPLY

Please enter your comment!
Please enter your name here