ನವದೆಹಲಿ: ಏಕದಿನ ವಿಶ್ವಕಪ್ ಅನ್ನು ಐತಿಹಾಸಿಕವಾಗಿ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಗೌರವ ಪಡೆದಿದೆ. ಭಾರತದ ಈ ಐತಿಹಾಸಿಕ ಸಾಧನೆಗಾಗಿ ರಾಷ್ಟ್ರಪತಿ ತಂಡದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದರು.
ಭೇಟಿ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಮಹಿಳೆಯರು ಇತಿಹಾಸ ಸೃಷ್ಟಿಸಿದ್ದಾರೆ. ಅವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ವಿಭಿನ್ನ ಪ್ರದೇಶ, ಸಾಮಾಜಿಕ ಹಿನ್ನೆಲೆ ಮತ್ತು ಸನ್ನಿವೇಶಗಳಿಂದ ಬಂದಿದ್ದರೂ, ಒಂದೇ ತಂಡವಾಗಿ ಭಾರತದ ಏಕತೆಯ ಸಂದೇಶ ನೀಡಿದ್ದಾರೆ.
ತಂಡದ ಯುವತಿಯರು ಭರವಸೆ ಮತ್ತು ಹತಾಶೆಯ ಎರಡೂ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಅನೇಕ ರಾತ್ರಿಗಳ ನಿದ್ದೆ ಕಳೆದುಕೊಂಡಿದ್ದರೂ, ಎಲ್ಲ ಸವಾಲುಗಳನ್ನು ಜಯಿಸಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಹಿಳೆಯರು ಜೀವನದಲ್ಲಿ ಮುನ್ನಡೆಯಲು ಈ ತಂಡ ನಿಜವಾದ ಪ್ರೇರಣೆ ಎಂದು ಶ್ಲಾಘಿಸಿದರು.
ಇನ್ನೊಂದು ಮಹತ್ವದ ಕ್ಷಣದಲ್ಲಿ, ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ವಿಶ್ವಕಪ್ ವಿಜೇತ ಜೆರ್ಸಿಯನ್ನು ರಾಷ್ಟ್ರಪತಿಗೆ ಸ್ಮರಣಿಕೆಯಾಗಿ ನೀಡಿ ಗೌರವ ಸಲ್ಲಿಸಿದರು.



























