ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದೈತ್ಯ ಪ್ರತಿಭೆ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಅಭೂತಪೂರ್ವ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ, ಒಂದೇ ತಂಡದ ಪರ 15 ಋತುಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 2011ರಲ್ಲಿ ಸೇರಿದ ರೋಹಿತ್ ಶರ್ಮಾ, ಕೇವಲ ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ಅಸಾಧಾರಣ ಸಾಧನೆ ಮಾಡಿದ್ದಾರೆ. ಹಾಗೇ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬರೋಬ್ಬರಿ ಐದು ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲದೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿಯೂ ಸಲ್ಲುತ್ತದೆ.

ನಂತರ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ (87 ಪಂದ್ಯಗಳು) ಎಂಬ ದಾಖಲೆ ರೋಹಿತ್ ಹೆಸರಿನಲ್ಲಿದೆ. ಇದರೊಂದಿಗೆ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಅತಿ ಹೆಚ್ಚು ಬಾರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದ ದಾಖಲೆ ಕೂಡ ಹಿಟ್‌ಮ್ಯಾನ್ ಪಾಲಾಗಿದೆ.
ಈ ವಿಶೇಷ ಸಂದರ್ಭವನ್ನು ಸಂಭ್ರಮಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಹದಿನೈದು ವರ್ಷಗಳ ಸುಂದರ ಪಯಣದ ವಿಡಿಯೋವೊಂದನ್ನು ಹಂಚಿಕೊಂಡಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದರೂ, ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ತಂಡದ ಶಕ್ತಿಯಾಗಿ ಮುಂದುವರಿಯುತ್ತಿದ್ದಾರೆ. ರೋಹಿತ್ ಈ ಸುದೀರ್ಘ ಪಯಣವು ಯುವ ಕ್ರಿಕೆಟಿಗರಿಗೆ ದೊಡ್ಡ ಪ್ರೇರಣೆಯಾಗಿದೆ.























