ದಿ ಓವಲ್: ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಕ್ರಿಕೆಟ್ ಟ್ರೋಫಿಯ ಅಂತಿಮ ಹಾಗೂ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಗೆಲುವು ಸಾಧಿಸುವ ಮೂಲಕ ಸರಣಿ ಡ್ರಾ ಮಾಡಿಕೊಂಡಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 373 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಇನ್ನು 6 ರನ್‌ಗಳು ಬಾಕಿ ಇರುವಂತೆಯೇ ಸರ್ವ ಪತನ ಕಂಡಿದೆ. ಅಂತಿಮವಾಗಿ ಇಂಗ್ಲೆಂಡ್ 367 ರನ್‌ಗಳಿಗೆ 10 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಪಂದ್ಯದ ಐದನೇ ದಿನವಾದ ಇಂದು ಇಂಗ್ಲೆಂಡ್‌ಗೆ ಗೆಲ್ಲಲು 35 ರನ್ ಅವಶ್ಯವಿದ್ದರೆ, ಇತ್ತ ಟೀಂ ಇಂಡಿಯಾ ಗೆಲುವಿಗೆ 4 ವಿಕೆಟ್‌ಗಳು ಬಾಕಿ ಇದ್ದವು. ಅದರಂತೆ ಐದನೇ ದಿನದಾಟ ಆರಂಭವಾಗುತ್ತಿದ್ದಂತೆ ಭಾರತೀಯ ಬೌಲರ್‌ಗಳ ದಾಳಿಗೆ ಇಂಗ್ಲೆಂಡ್ ನಲುಗಿದೆ. ಟೀಂ ಇಂಡಿಯಾ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಆಲೌಟ್ ಮಾಡುವ ಮೂಲಕ ವೀರೋಚಿತ ಗೆಲುವು ಸಾಧಿಸಿದೆ.
ಮೊದಲ ಬ್ಯಾಂಟಿಗ್ ಮಾಡಿದ್ದ ಭಾರತವನ್ನು ಆಂಗ್ಲರು ಕೇವಲ 224 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಇಳಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರರು ಉತ್ತಮ ಆರಂಭವನ್ನು ನೀಡಿದರಾದರೂ ಮುಂದೆ ಬಂದ ಯಾವೊಬ್ಬ ಆಟಗಾರನೂ ಗಟ್ಟಿಯಾಗಿ ನಿಲ್ಲದೆ ಪೆವಿಲಿಯನ್ ಪರೇಡ್ ನಡೆಸಿದ್ದರು.
ಒಟ್ಟಾರೆ ಮಳೆಯ ಅಡೆತಡೆಗಳ ಮಧ್ಯೆಯೂ ದಿ ಓವಲ್ ಟೆಸ್ಟ್ 2ನೇ ದಿನವೇ ಎರಡು ತಂಡಗಳ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 224 ರನ್‌ಗಳಿಗೆ ತನ್ನ ಪಾಳಿಯನ್ನು ಮುಗಿಸಿದರೆ, ಇಂಗ್ಲೆಂಡ್ ಕೂಡ 23 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಭಾರತೀಯ ವೇಗಿಗಳಿಗೆ ವಿಕೆಟ್ 247 ರನ್‌ಗಳಿಗೆ ಸರ್ವಪತನ ಕಂಡಿತ್ತು. ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಗೌರವ ತಂದುಕೊಟ್ಟಿದ್ದರು.
ಸಿರಾಜ್-ಪ್ರಸಿದ್ಧ್ ಮಾರಕ ದಾಳಿ: ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಅವರ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ. ಎರಡೂ ಇನ್ನಿಂಗ್ಸ್‌ನಲ್ಲಿಯೂ ಈ ಇಬ್ಬರೇ ಬೌಲರ್‌ಗಳದ್ದೇ ದರ್ಬಾರ್ ಎನ್ನುವಂತಾಗಿತ್ತು. ಇಂಗ್ಲೆಂಡ್‌ನ ಬ್ಯಾಟ್ಸಮನ್‌ಗಳಿಗೆ ಆರಂಭದಿಂದಲೂ ಈ ಇಬ್ಬರೂ ಬೌಲರ್‌ಗಳು ಕಾಡಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 86 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಪ್ರಸಿದ್ಧ್ ಕೃಷ್ಣ 62 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 104 ರನ್‌ಗಳಿಗೆ 5 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 126 ರನ್‌ಗಳಿಗೆ 4 ವಿಕೆಟ್ ಕೆಡವಿದರು.
ಒಟ್ಟಾರೆ ಎರಡೂ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ರನ್ ಗಳಿಸಲು ಪರದಾಡುವಂತೆ ಮಾಡಿದರು. ಅಂತಿಮ ದಿನದಲ್ಲಿ ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಅವಶ್ಯವಿದ್ದಾಗ ಇನ್ನೂ 4 ವಿಕೆಟ್‌ಗಳು ಬಾಕಿ ಇದ್ದವು. ಬಹುಶಃ ಇಂಗ್ಲೆಂಡ್ ಗೆಲುವು ಸುಲಭ ಎಂದುಕೊಂಡಿದ್ದವರಿಗೆ ಮೊಹಮ್ಮದ್ ಸಿರಾಜ್ ಶಾಕ್ ಕೊಟ್ಟರು. ಭಾರತ ಗೆಲುವಿಗೆ ಬೇಕಿದ್ದ ನಾಲ್ಕು ವಿಕೆಟ್‌ಗಳ ಪೈಕಿ ಮೂರು ವಿಕೆಟ್‌ಗಳನ್ನು ಸಿರಾಜ್ ಉರುಳಿಸಿದರು.